ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ಬಿಜೆಪಿಯ ಮಹಿಳಾ ಸದಸ್ಯೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿ ಅಮಾನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಹಲ್ಲೆಗೆ ಒಳಗಾಗಿದ್ದ ಮಹಿಳಾ ಸದಸ್ಯ ಚಾಂದಿನಿ ನಾಯಕ್ ಅವರಿಗೆ ಗರ್ಭಪಾತವಾಗಿದೆ.
ಬಿಜೆಪಿಯ ಮೂವರು ಮಹಿಳಾ ಸದಸ್ಯರ ಮೇಲೆ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿದ್ದು, ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿತ್ತು. ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನೆ ನಡೆದಿತ್ತು. ನ.9ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ತಮಗೆ ಅವಕಾಶ ಸಿಗದೇ ಇದ್ದ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದರು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಬಿಜೆಪಿಯ ಸದಸ್ಯರಾದ ಗೋದಾವರಿ, ಚಾಂದಿನಿ ನಾಯ್ಕ ಹಾಗೂ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಈ ಎಳೆದಾಟದಲ್ಲಿ ಸದಸ್ಯೆ ಚಾಂದಿನಿ ನಾಯ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಗಾಯಗೊಂಡಿದ್ದ ಚಾಂದಿನಿ ನಾಯಕ್ ಮೂರು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ಗರ್ಭಪಾತವಾಗಿಗಿರುವುದಾಗಿ ತಿಳಿದುಬಂದಿದೆ.
ಚಾಂದಿನಿ ನಾಯಕ್ ಸೇರಿದಂತೆ ಒಟ್ಟು ಮೂರು ಮಹಿಳಾ ಸದಸ್ಯರನ್ನ ಎಳೆದಾಡಿದ್ದರು. ಬಿಜೆಪಿಯ ಚಾಂದಿನಿ ನಾಯಕ್ ಮತ್ತು ಇತರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲಿದ್ದಾರೆ ಎಂಬ ಮಾಹಿತಿ ಶಾಸಕರಿಗೆ ಸಿಕ್ಕಿತ್ತು. ಚುನಾವಣೆಯಲ್ಲಿ ಭಾಗವಹಿಸದಂತೆ ತಡೆದಿದ್ದರು. ಇದರ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಘಟನೆ ನಡೆದು ಹಲವು ದಿನಗಳ ಬಳಿಕ ಚಾಂದಿನಿ ನಾಯಕ್ ಗರ್ಭಪಾತಕ್ಕೆ ಒಳಗಾಗಿದ್ದಾರೆ.



