2019 ರ ಸೆಪ್ಟೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕವು ನೆರೆ ಹಾನಿಗೆ ತತ್ತರಿಸಿದ್ದಾಗ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಧವಳೇಶ್ವರ, ಬೀರನಗಡ್ಡೆ ಮತ್ತಿತರ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಪರಿಹಾರ ವಿತರಣೆಯ ತರುವಾಯ ಮಾರ್ಗ ಮಧ್ಯೆ ಐತಿಹಾಸಿಕ ಸ್ಥಳ ಕಿತ್ತೂರಿಗೆ ಭೇಟಿ ನೀಡಿದ್ದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಲ್ಲಿನ ಅಸಮರ್ಪಕ ಕಾರ್ಯನಿರ್ವಹಣೆ ಕುರಿತು ಬೇಸರ ವ್ಯಕ್ತ ಪಡಿಸಿದ್ದರು.
ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಮೊದಲ ಕನ್ನಡತಿ, ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ವಿಜಯ ಸಾಧಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು,ಸ್ವಾತಂತ್ರ್ಯ-ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರು ರಾಣಿ ಚೆನ್ನಮ್ಮ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ೧೮೨೪ರ ಅಕ್ಟೋಬರ್ ೨೨ ರಂದು ಮಹಾನವಮಿಯ ಆಯುಧ ಪೂಜೆ ಹಾಗೂ ಆದಿ ಶಕ್ತಿ ದುರ್ಗಾಮಾತೆಯ ಪೂಜೆಯ ಭಕ್ತಿ ಭಾವದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ನಾಡಿನ ಪ್ರಜೆಗಳು ಮಗ್ನರಾಗಿದ್ದರು. ಆದರೆ ಕಿತ್ತೂರಿನ ಮೇಲೆ ಏಕಾಏಕಿ, ಬ್ರಿಟಿಷರ ಶತ್ರು ಸೈನ್ಯದ ದಾಳಿಯಿಂದ ಪ್ರಜೆಗಳು ದಿಗ್ಭ್ರಮೆಗೊಂಡರು. ಆದರೆ ರಾಣಿ ಚೆನ್ನಮ್ಮ ಅವರು ಎಲ್ಲರಿಗೂ ಧೈರ್ಯ ತುಂಬಿ, ಯುದ್ಧಕ್ಕೆ ಸನ್ನದ್ಧರಾಗುವಂತೆ ತಮ್ಮ ಸೈನಿಕರಿಗೆ ಹುರಿದುಂಬಿಸಿದಳು. ಕಿತ್ತೂರಿನ ಮೇಲೆ ದಾಳಿ ನಡೆಸಿ, ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಕನಸಿನಲ್ಲಿದ್ದ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಹಾಗೂ ಆತನ ಸೈನ್ಯ, ಕಿತ್ತೂರಿನ ಸೈನಿಕರ, ಶಕ್ತಿ, ಶೌರ್ಯವನ್ನು ಕಂಡು ದಂಗಾಗಿ ಹೋದರು. ಸ್ವತಃ ವೀರರಾಣಿ ಚೆನ್ನಮ್ಮ ಕತ್ತಿ ಹಿಡಿದು ಹೋರಾಟ ನಡೆಸುವ ಮೂಲಕ ಸೈನಿಕರನ್ನು ಹುರಿದುಂಬಿಸಿದ್ದಕ್ಕೆ, ಬ್ರಿಟಿಷರ ಸೈನ್ಯ ಹಾಗೂ ಬ್ರಿಟಿಷ್ ಅಧಿಕಾರಿ ಥ್ಯಾಕರೆ, ಕಿತ್ತೂರು ಸೈನಿಕರ ಆಯುಧಗಳಿಗೆ ಮಹಾನವಮಿಯ ಮಾರಣ ಹೋಮಕ್ಕೆ ಬಲಿಯಾದರು. ವೀರರಾಣಿ ಚೆನ್ನಮ್ಮ ದುರ್ಗೆಯ ಅವತಾರದಲ್ಲಿ ವೀರಾವೇಶದಿಂದ ಹೋರಾಡಿ, ಬ್ರಿಟಿಷರನ್ನು ಯುದ್ಧಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದಳು ಇಂತಹ ನಮ್ಮ ವೀರ ಕನ್ನಡತಿಯ ಕಿತ್ತೂರು ಕೋಟೆಯ ತುಂಬಾ ಬೆಳೆದಿರುವ ಪಾರ್ಥೇನಿಯಂ ಗಿಡಗಳು, ಬೀಡಾಡಿ ಧನಗಳ ದಾಳಿ, ಕಸದ ರಾಶಿ , ಪ್ಲಾಸ್ಟಿಕ್ ತ್ಯಾಜ್ಯ, ಗುಟ್ಕಾ ಪೇಪರ್ ಕಂಡು ಐತಿಹಾಸಿಕ ಸ್ಥಳಕ್ಕೆ ಬಂದಿರುವ ದುರ್ಗತಿಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಇಲ್ಲಿನ ಅಧಿಕಾರಿ ರಾಘವೇಂದ್ರರವರೊಂದಿಗೆ ಕೋಟೆ ನಿರ್ವಹಣೆಯ ಸಂಪೂರ್ಣ ಮಾಹಿತಿ ಪಡೆದ ಶ್ರೀಗಳು ಮಾತನಾಡಿ ವಿದೇಶಗಳಲ್ಲಿ ಐತಿಹಾಸಿಕ ಸ್ಥಳಗಳನ್ನು ಎಷ್ಟು ಜವಾಬ್ದಾರಿ ಮತ್ತು ಆಧುನಿಕತೆಯನ್ನು ಬಳಸಿಕೊಂಡು ಪ್ರವಾಸಿ ತಾಣಗಳನ್ನಾಗಿಸಿ, ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಆದರೆ ನಮ್ಮಲ್ಲಿ ಅದಕ್ಕೆ ವಿರುದ್ಧವಾದ ಪರಿಸ್ಥಿತಿ ಇದ್ದು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ವೀರಮಾತೆ, ಕನ್ನಡಿಗರ ಸ್ವಾಭಿಮಾನದ ಸಂಕೇತದಂತಿರುವ ರಾಣಿ ಚೆನ್ನಮ್ಮನ ವೀರಗಾಥೆ ಸಾರುವ ಕಿತ್ತೂರು ಇಂದು ಹರಟೆ ಹೊಡೆಯುವರ, ಇನ್ನಿತರ ಚಟುವಟಿಕೆಯ ತಾಣವಾಗಾರುವುದು ವಿಷಾದಕರ ಸಂಗತಿ ಎಂದರು.
ಆಳುವ ನಾಯಕರು ದೇಶದಲ್ಲಿ ಭಾಷಣದಲ್ಲಿಯೇ ಮುಳುಗಿದ್ದು, ಕಾರ್ಯ ಸಾಧನೆಯಲ್ಲಿ ಹಿಂದುಳಿದಿರುವುದು ದುರ್ದೈವವಾಗಿದೆ ಎಂದರು.ಕಿತ್ತೂರು ಉತ್ಸವಕ್ಕೆ ಮಾತ್ರ ಸರ್ಕಾರ ಸೀಮಿತವಾಗಬಾರದು. ಈ ಚಾರಿತ್ರಿಕ ಸ್ಥಳಕ್ಕೆ ಸಲ್ಲಬೇಕಾದ ಮಾನ್ಯತೆ ದೊರೆಯಲೇಬೇಕು. ನಿರಂತರವಾಗಿ ಈ ಸ್ಥಳಕ್ಕೆ ಮಕ್ಕಳು,ಶಿಕ್ಷಕರು,ಆಸಕ್ತರು,ಇತಿಹಾಸ ಅಭ್ಯಾಸಕರು ಬರುವಂತಾಗಬೇಕು,ಚೆನ್ನಮ್ಮನ ವೀರಗಾಥೆಯನ್ನು ನಾಡಿನ ಮಕ್ಕಳು ತಮ್ಮ ವೇಷ ಭೂಷಣದ ಮೂಲಕ ಎಲ್ಲೆಡೆ ಅಭಿವ್ಯಕ್ತಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ತರಳಬಾಳು ಮಠದಿಂದ ಐವತ್ತು ಸಾವಿರ ರೂಪಾಯಿ
ಕಿತ್ತೂರು ಐತಿಹಾಸಿಕ ಸ್ಥಳವನ್ನು ಮರೆ ಮಾಚುವಂತೆ ಬೆಳೆದಿರುವ ಪಾರ್ಥೇನೆಯಂ, ಕಳೆ, ಕಸ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತ ನಿರ್ವಹಣೆಯಲ್ಲಿ ಸ್ವಚ್ಛಗೊಳಿಸುವಂತೆ ಶ್ರೀ ತರಳಬಾಳು ಮಠದಿಂದ ಐವತ್ತು ಸಾವಿರ ರೂಪಾಯಿಗಳನ್ನು ಅಲ್ಲಿನ ಅಧಿಕಾರಿಗೆ ಶ್ರೀಜಗದ್ಗುರುಗಳು ದಯಪಾಲಿಸಿದರು. ಹಣ ಪಡೆಯಲು ಭಯದಿಂದ ನಿರಾಕರಿಸಿದ ಅಧಿಕಾರಿ ರಾಘವೇಂದ್ರರವರಿಗೆ ಆತ್ಮವಿಶ್ವಾಸ ತುಂಬಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಆತಂಕ ಪಡದೇ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ಶ್ರೀ ಸಿ.ಟಿ.ರವಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶ್ರೀ ಜಗದ್ಗುರುವರ್ಯರು ಜನಪ್ರತಿನಿಧಿಗಳು ಭಾಷಣಕ್ಕೆ ಸೀಮಿತರಾಗದೆ ಕರ್ತವ್ಯ ಮಗ್ನರಾಗಿ ಎಂದು ಸೂಚಿಸಿದರು. ಕಿತ್ತೂರು ಸ್ಥಳದ ವಾಸ್ತವತೆಯನ್ನು ಸಚಿವರಿಗೆ ತಿಳಿಸಿದ ಶ್ರೀ ಜಗದ್ಗುರುವರ್ಯರು ವಿಶೇಷ ಅನುದಾನವನ್ನು ಮಂಜೂರು ಮಾಡಿ ಕಿತ್ತೂರು ವೈಭವವನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದ್ದರು.