ಅಂಕಣ
ವಿಧಿಯು ದೇವರಿಗಿಂತ ಭಿನ್ನವಾದ ಶಕ್ತಿಯೇ ?
-ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ತರಳಬಾಳು ಬೃಹನ್ಮಠ, ಸಿರಿಗೆರೆ.
ಕಳೆದ ಎರಡು ವಾರಗಳ ನಮ್ಮ ಬಿಸಿಲು ಬೆಳಲಿಂಗಳು ಅಂಕಣ ಬರೆಹಗಳಿಗೆ ಈ ಹಿಂದಿನ ಯಾವ ಅಂಕಣ ಬರೆಹಗಳಿಗೂ ಬಾರದಷ್ಟು ಪ್ರತಿಕ್ರಿಯೆಗಳು ಪ್ರವಾಹದೋಪಾದಿಯಲ್ಲಿ ಹರಿದು ಬಂದಿವೆ. ನೋಡ ನೋಡುತ್ತಿದ್ದಂತೆಯೇ ಮಳೆ ಸುರಿದು ಹಳ್ಳ ಕೊಳ್ಳಗಳಲ್ಲಿ ಹೆದ್ದೊರೆಯು ಭೋರ್ಗರೆದು ಹರಿದು ನದಿ ಕೆರೆಕಟ್ಟೆಗಳು ತುಂಬಿದಂತಾಗಿದೆ. ಈ ಎರಡು ಬರೆಹಗಳು ಓದುಗರ ಹದಯವನ್ನು ತಟ್ಟಿವೆ; ಅವರ ಬೌದ್ದಿಕ ಚಿಂತನೆಯನ್ನು ಜಾಗೃತಗೊಳಿವೆ. ‘ಇದೇ ಅಲ್ಲವೇ ಸತ್ವಯುತ ಬರಹದ ಶಕ್ತಿ!’ ಎಂದುದು ಸಹೃದಯ ಓದುಗರೊಬ್ಬರು ಬಣ್ಣಿಸಿದ್ದಾರೆ. ಆದರೆ ನಮ್ಮ ಬರೆಹಕ್ಕಿಂತ ಕ್ರೂರ ಅಟ್ಟಹಾಸಕ್ಕೆ ನಲುಗಿದ ಜೀವಗಳ ನೋವು ಓದುಗರ ಹೃದಯವನ್ನು ಹಿಂಡಿದೆ. ಜೊತೆಗೆ ತಮ್ಮ ತಪ್ಪೇನೂ ಇಲ್ಲದಿದ್ದರೂ ಜೀವನದಲ್ಲಿ ಬಂದೊದಗಿದ ದಾರುಣವಾದ ನೋವಿನ ಸಂಗತಿಗಳು ಈ ಪ್ರತಿಕ್ರಿಯೆಗಳಿಗೆ ಜಲಾಶಯದ ಕ್ರೆಸ್ಟ್‌ಗೇಟ್ ತರೆದಂತಾಗಿದೆ!
ದೇವರು ತನ್ನ ಭಕ್ತರನ್ನು ಕಾಯಲು ಸದಾ ಸಿದ್ಧ. ಭಕ್ತವತ್ಸಲ ಎಂಬುದೇ ಅವನ ಹೆಗ್ಗಳಿಕೆ. ತನ್ನ ಭಕ್ತ ಪ್ರಹ್ಲಾದನ ಕರೆಗೆ ಓಗೊಟ್ಟು ಕಂಬವನ್ನು ಸೀಳಿಕೊಂಡು ನರಸಿಂಹನಾಗಿ ಅವತರಿಸಿ ಬಂದ, ಕರಿರಾಜ ಕಷ್ಟದಲ್ಲಿ ಸಿಲುಕಿ ‘ಅದಿಮೂಲಾ’ ಎಂದು ಕರೆಯಲಾಕ್ಷಣ ಬಂದು ಬದುಕಿಸಿದ. ಸಭೆಯೊಳಗೆ ದ್ರೌಪದಿಯ ಮೊರೆಯನಾಲಿಸಿ ಅಕ್ಷಯವಸನವನ್ನು ದಯಪಾಲಿಸಿದ. ‘ಸಮಯಾನಮಯವುಂಟೆ ಭಕ್ತವತ್ಸಲ ನಿನಗೆ ಕಮಲಾಕ್ಷ ಕಾಗಿನೆಲೆಯಾದಿಕೇಶವನೆ’ ಎಂಬುದು ಕನಕದಾಸರ ಅಚಲ ನಂಬಿಕೆ. ಶಿವಲಿಂಗವನ್ನು ತಬ್ಬಿ ಹಿಡಿದ ಮಾರ್ಕಂಡೇಯನನ್ನು ಯಮಪಾಶ ಕಟ್ಟಿಹಾಕದಂತೆ ಕಾಪಾಡಿದ. ಬೇಡರ ಕಣ್ಣಪನ, ಕೋಳೂರ ಕೊಡಗೂಸಿನ ಮುಗ್ಧ ಭಕ್ತಿಗೆ ಒಲಿದ. ‘ಮೊರೆಹೊಕ್ಕವರ ಕಾಯ್ವ ಬಿರುದು, ನೀ ಮರೆಯದೆ ರಕ್ಷಣೆ ಮಾಡೆನ್ನ ಫೊರೆದು’ ಎಂದು ಬೇಡುತ್ತಾರೆ ಪುರಂದರದಾಸರು! ‘ನಂಬಿ ಕರೆದೊಡೆ ಓ ಎನ್ನನೇ ಶಿವನು? ಎನ್ನುತ್ತಾರೆ ಬಸವಣ್ಣನವರು.
ಹೀಗೆ ಭಕ್ತವತ್ಸಲನೆಂಬ ಬಿರುದು ಹೊತ್ತ ಮೇಲೆ ದೇವರು ಭಕ್ತರನ್ನು ಕಾಪಾಡಬೇಕಲ್ಲವೇ? ಸಜ್ಜನರು ಹೆಜ್ಜೆ ಹೆಜ್ಜೆಗೆ ಅನುಭವಿಸುವ ನೋವೇಕೆ? ಹಾಗಾದರೆ ವಿಧಿ ಎಂಬುದೇನು? ಅದು ದೇವರಿಗೆ ಅಧೀನವೆ? ದೇವರಗಿಂತ ಭಿನ್ನವಾದ ಶಕ್ತಿಯೇ? ವಿಧಿಯ ಗರಗಸಕ್ಕೆ ಕರುಣೆಯಿಲ್ಲವೇ? ಅದಕ್ಕೆ ನಿಷ್ಪಾಪಿ ಮನುಜನರನ್ನು ‘ಹೋಗುತ್ತಲು ಕೊಯ್ಯುವ, ಬರುತ್ತಲೂ ಕೊಯ್ಯುವ’ ಕಟುಕತನವೇಕೆ? ಇವೆಲ್ಲವೂ ಮಿಲಿಯನ್ ಡಾಲರ್ ಪ್ರಶ್ನೆಗಳೇ ಆದರೂ ನಮ್ಮ ಓದುಗರು ಪರಾಂಬರಿಸಿದ್ದಾರೆ. ಈ ಮುಂದಿನ ಕೆಲವು ಪ್ರತಿಕ್ರಿಯೆಗಳನ್ನು ಎಲ್ಲ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿದೆ:
1 “ಬಿಸಿಲ ಬೆಳದಿಂಗಳು!” ಶೀರ್ಷಿಕೆಯೇ ಸೂಚಿಸುವಂತೆ ಬಿಸಿಲು ಬೆಳದಿಂಗಳ ಬೆಸುಗೆಯೇ ಬದುಕು.ರಾತಿ-ಹಗಲು, ಕತ್ತಲು-ಬೆಳಕು, ಕಷ್ಟ-ಸುಖ ಇವೆಲ್ಲ ಒಟೊಟ್ಟಿಗೆ ಹೋಗುತ್ತವೆ, ಹೋಗಬೇಕು. ನಾಣ್ಯದ ಎರಡು ಮುಖಗಳ ಹಾಗೆ ಒಂದಿಲ್ಲದೆ ಮತ್ತೊಂದಿರುವುದಿಲ್ಲ. ಒಂದೇ ಇದ್ದರೆ ಬದುಕಿನ ಸೊಗಸೆಲ್ಲಿ? ಸವಾಲು, ನೋವು ಕಷ್ಟಗಳನ್ನು ಎದುರಸುವುದರಲ್ಲಿಯೇ ಬದುಕಿನ ಸ್ವಾರಸ್ಯ ಇರುವುದು; ಮನಸ್ಸು ಪಕ್ವಗೊಳ್ಳುವುದು. (ಸಿ.ಪಿ.ವಿ ಗುಪ್ತ,ಮೈಸೂರು).
2.ಕೊರೊನಾ ಎಷ್ಟೋ ಕುಟುಂಬಗಳ ಜೋಡಿಗಳನ್ನು ಅಗಲಿಸಿತು. ಅದು ಬಲು ಸಂಕಟದ ಸಂಗತಿ. ಹಾಗೆಂದು ವಿಧಿಯನ್ನು ನಿಂದೆ ಮಾಡುವುದೂ ತಪ್ಪೇ. ಅವರವರ ಕರ್ಮಾನುಸಾರ ಅವರ ಜೀವನ ನಡೆಯುತ್ತದೆ. ಕಷ್ಟಗಳು, ದುಃಖಗಳು ಎದುರಾದಾಗ ಭಗವಂತ ನಮ್ಮ ಸ್ಮರಣೆಯಲ್ಲಿ ಬರಲಿ (ಸತ್ಯಪ್ರಭಾ, ಚಿತ್ರದುರ್ಗ).
3.ಬಂದ ನೋವುಗಳೆಲ್ಲ ಶಾಶ್ವತವಲ್ಲ. ರಾತ್ರಿ ಮುಗಿದ ಮೇಲೆ ಬೆಳಕು ಹರಿಯಲೇ ಬೇಕು. ಇದು ಕಾಲಚಕ್ರದ ನಿಯಮ, ಕೆಲವರಿಗೆ ಬೇಗ ಬೆಳಕು ಹರಿಯಬಹುದು; ಕೆಲವರಿಗೆ ನಿಧಾನವಾಗಬಹುದು. “ಭಗವಾನ್ ಕೇ ಘರ್ ಮೇ ದೇರ್‌ಹೈ, ಅಂಧೇರಾ ನಹೀ”!(ಕೃಷ್ಣಮೂರ್ತಿ, ಬೆಂಗಳೂರು).
4.ಅನುಭವಿಸದವನಿಗೆ ಮಾತ್ರ ನೋವಿನ ತೀವ್ರತೆ ತಿಳಿದೀತು. ತೀವ್ರವಾಗಿ ಬಾಧಿತನಾದವನಿಗೆ ಬೇರೆಯವರು ಸಾಂತ್ವಾನ ಹೇಳಬಹುದೇ ಹೊರತು ಬಾಗಸ್ಥರಾಗಲು ಸಾಧ್ಯವಿಲ್ಲ, “ಸ್ನಿಗ್ದ-ಜನ-ಸಂವಿಭಕ್ತಂ ಹಿ ದುಃಖಂ ಸಹ್ಯ ವೇದನಂ ಭವಿಷ್ಯತಿ” ಎಂಬಂತೆ ಆತ್ಮೀಯರೊಂದಿಗೆ ದುಃಖವನ್ನು ನಿವೇದಿಸಿಕೊಳ್ಳುವುದು ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ಆತ್ಮೀಯರು ತಮ್ಮ ಅನುಭವಗಳನ್ನು ಬೆಸೆದು ಸಮಾಧಾನ ಹೇಳಬಹುದು. ಆದರೆ ಮನದ ನೋವು ಏನೆಂಬುದು ಅನುಭವಿಸಿದವರಿಗೆ ಮಾತ್ರ ವೇದ್ಯ. (ಟಿ.ವಿ ಸುರೇಶ ಗುಪ್ತ ಚಿತ್ರದುರ್ಗ).
5.ದಾವಣಗೆರೆಯಲ್ಲಿ ನಾನಿದ್ದಾಗ ನನ್ನ ತಂದೆಯವರು. ನಮ್ಮ ಮನೆಯಲ್ಲಿದ್ದರು. ಅವರನ್ನು ಊರಿಗೆ ಕರೆದೂಯ್ಯಲು ನನ್ನ ತಮ್ಮ ಬರುವವನಿದ್ದ ಸಾಯಂಕಾಲದ ತನಕ ಅವನು ಬರಲಿಲ್ಲ. ಸಂಜೆ ಪೂಲೀಸು ಸ್ಟೇಶನ್ ನಿಂದ ಕೆರೆ ಬಂತು. “ಒಂದು ಶರೀರದ ಚಹರೆಯನ್ನು ನೋಡಿ ಪತ್ತೆ ಹಚ್ಚಲು ತಕ್ಷಣ ಬನ್ನಿ”. ದಾವಣಗೆರೆಗೆ ಬರುವ ಮಾರ್ಗ ಮಧ್ಯದಲ್ಲಿ ತಮ್ಮ ತೀರಿಕೊಂಡಿದ್ದ. ಶವವನ್ನು ಊರಿಗೆ ತಂದಾಗ ತಮ್ಮನ ಹೆಂಡತಿಯ ಗೋಳಾಟದ ದೃಶ್ಯ ಶ್ರೀಗಳವರ ಅಂಕಣ ಓದಿದಾಗ ಕಣ್ಣ ಮುಂದೆ ಬಂತು. ಅಂದು ನಾದಿನಿಯ ದುಃಖಕ್ಕೆ ಸಾಂತ್ವನವಿರಲಿ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾವಾರೂ ಇರಲ್ಲ ಈಗ ಚೇತರಿಸಿಕೊಂಡಿದ್ದಾರೆ. ಎರಡು ಮಕ್ಕಳನ್ನು ಬೆಳೆಸಿ ದಡ ಸೇರಿಸಿದ್ದಾರೆ. ನನ್ನ ತಮ್ಮ ಇದ್ದಿದ್ದರೆ ಏನೆಲ್ಲಾ ಸಾಧಿಸುತ್ತಿದ್ದನೋ ಅದನ್ನೆಲ್ಲಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ”ಕಾಲಕ್ಕೆ” ಮಾತ್ರ ಸಾಂತ್ವನ ಹೇಳುವ ಶಕ್ತಿಯಿದೆ ಎನಿಸುತ್ತದೆ! (ಸಿ.ಆರ್.ನಾಗರಾಜ ಶೆಟ್ಟಿ ಬೆಂಗಳೂರು).
6.ಈ ಲೋಕದಲ್ಲಿ ನಮ್ಮವಾಸ ಶಾಶ್ವತವಲ್ಲ. ಹಗಲು ಕಳೆವುದು, ಇರುಳು ಬರುವುದು. ಮೋಡ ಮಳೆ ಸುರಿಸಿ ಮಾಯವಾಗುವುದು. ಹಾಗೆಯೇ ಜೀವನದಲ್ಲಿ ಮಂದಹಾಸ ಮೂಡಿ ಮಾಯವಾಗುವುದು ಅಷ್ಟೇ ಸತ್ಯ. ಕವಿದ ಕತ್ತಲು ದೂರವಾಗಿ ಬೆಳಕು ಮೂಡುವುದು – ಬಾನನ್ನು ಬೆಳಗುವ ಭಾಸ್ಕರನಂತೆ! ಈ ಭರವಸೆ ಬಹಳ ಮುಖ್ಯ. (ಅನಿತಾ ಶೆಟ್ಟರ್ ಬೆಂಗಳೂರು).
7.ಒಮ್ಮೆ ಹರಿಹರದಿಂದ ರಾಣೇಬೆನ್ನೂರಿಗೆ ಹೋಗಲು ಬಸ್ ಕಾಯುತ್ತಿದ್ದೆ. ಅಷ್ಟರಲ್ಲಿ ಬಂದ ವ್ಯಾನಿಗೆ ಜನ ಹತ್ತತೊಡಗಿ ಭರ್ತಿಯಾಯಿತು; ನನ್ನನ್ನು ಹತ್ತಿಸಿಕೊಳ್ಳದೆ ಹೊರಟು ಹೋಯಿತು. ಇನ್ನೊಂದು ವಾಹನದಲ್ಲಿ ಹೊರಟ ನಾನು ಚಳಗೇರಿ ಸಮೀಪ ಭೀಕರ ಅಪಘಾತವನ್ನು ಕಂಡೆ. ನೋಡಿದರೆ ನನ್ನನ್ನು ಹತ್ತಿಸಿಕೊಳ್ಳದೆ ಹೋದ ಹೊರಟ ವ್ಯಾನ್ ಅದೇ ಆಗಿತ್ತು. ನನಗೆ ನಿರಾಕರಿಸಿದ ವ್ಯಕಿಯೂ ಮರಣವನ್ನಪ್ಪಿದ್ದ! ವಿಧಿಯನ್ನು ಹೆಡೆಮುರಿ ಕಟ್ಟಿ ಹಾಕುವುದು ಸಾಧ್ಯವಿಲ್ಲ. ಆದರೆ ಅವಕಾಶಗಳನ್ನು ಬಳಸಿಕೊಂಡು ಸುಂದರ ಬಾಳ್ವೆ ನಡೆಸುವುದು ಮನುಷ್ಯನಿಗೆ ಸಾಧ್ಯ. ತನ್ನ ಸುಖ ದುಃಖಗಳನ್ನು ಹಂಚಿಕೊಂಡು ಉತ್ತಮ ಬಾಳ್ವೆ ನಡಸಬೇಕು. ನಮ್ಮ ಕಷ್ಟಗಳಿಗೆ ವಿಧಿಯನ್ನು ಬಯ್ಯದೆ ಬಂದುದನ್ನು ಬಂದ ಹಾಗೆಯೇ ಸ್ವೀಕರಿಸಿ ಇಹದ ಬದುಕಿಗೆ ವಿದಾಯ ಹೇಳಬೇಕು. ಈ ಬೃಹತ್ ಬಹ್ಮಾಂಡದಲ್ಲಿ ನಮ್ಮ ಭೂಮಿ ಒಂದು ಚುಕ್ಕಿಯಷ್ಟೇ! (ಸಿದ್ದನಗೌಡ,ಉಜ್ಜಿನಿ).
8.ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗುವ ನಾವು ತಂದಿಲ್ಲದಕ್ಕೆ, ಕೊಂಡೊಯ್ಯದ್ದಕ್ಕೆ ಬಡಿದಾಡುವೆವು. ಗೆದ್ದರೆ ಬೀಗುವೆವು, ಸೋತರೆ ವಿಧಿಯ ದೂರುವೆವು. ಇದೇ ಈ ಜಗದ ವಿಪರ್ಯಾಸವು. (ಕೃಷ್ಣಸ್ವಾಮಿ ಸಿ.ಆರ್, ಬೆಂಗಳೂರು).
9.ಕೆಲವೇ ದಿನಗಳ ಹಿಂದಿನ ನನ್ನದೇ ಅನುಭವ. ನಮ್ಮ ಮನೆಗ ಬಂದಿದ್ದ ಸದೃಢವಾಗಿದ್ದ ಮಾವನವರು ನಮ್ಮ ಕಣ್ಣೇದುರಿಗೇ ಗತಿಸಿದರು.ನಮ್ಮೂರಿಗೆ ಬರದಿದ್ದರೆ ಚೆನ್ನಾಗಿತ್ತು, ಉಳಿಯುತ್ತಿದ್ದರೇನೋ! ಅವರ ಕೊನೆಯಾಸೆ ನಮ್ಮನ್ನೆಲ್ಲಾ ನೋಡುವುದಾ…ಹೀಗೆ ಸಾಲು ಸಾಲು ಯೋಚನೆಗಳು! ಅವರ ಅಂತಿಮ ಕ್ಷಣ ಇಲ್ಲೇ ಎಂದು ವಿಧಿ ಬರೆದಿದ್ದಾನೆಂದೂಕೊಂಡು ವಿಧಿಯ ಆಟಕ್ಕೆ ಕೈಮುಗಿದು ಸುಮ್ಮನಾದೆವು! (ಜೆ.ಆರ್. ಶಿವಕುಮಾರ ಚಿತ್ರದುರ್ಗ).
10.ಬದುಕಿನ ಮೊದಲ ಅಧ್ಯಾಯವಾದ ಹುಟ್ಟಿಗೆ ನಾವು ಕಾರಣರಲ್ಲ. ಹಾಗೆಯೇ ಕೊನೆಯ ಅಧ್ಯಾಯವಾದ ಸಾವಿಗೂ ನಾವು ಕಾರಣರಾಗಬಾರದು. ವಿಪರ್ಯಾಸವೆಂದರೆ ಕೊನೆಯ ಅಧ್ಯಾಯ ಯಾವುದು? ಯಾವಾಗ? ಎಂಬುದು ಘಟಿಸಿದ ನಂತರವಷ್ಟೇ ತಿಳಿಯುವುದು; ನಮಗಲ್ಲ ಇತರರಿಗೆ!! (ನಾರಾಯಣ ದೊಂತಿ,ಚಿತ್ರದುರ್ಗ).
11.ವಿಧಿ ಎಂಬುದು ಎರಡೇ ಅಕ್ಷರವಾದರೂ ಅದರ ವಿಸ್ತ್ರೀರ್ಣ ಎಣೆಯಿಲ್ಲದಷ್ಟು ಅಗಾಧ! ಇದನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಜೀವನದ ಆಗು ಹೋಗುಗಳಲ್ಲಿ ಬಳಸುತ್ತೇವೆ.(ಶಶಿಕಲಾ ಅಜ್ಜಂಪುರ ಬೆಂಗಳೂರು).
12.ಎಲ್ಲರೂ ವಿಧಿಯ ವಶವರ್ತಿಗಳೇ. “ಹೆತ್ತಾತ ಅರ್ಜುನ, ಮುತ್ತಾತ ದೇವೆಂದ್ರ, ಸತ್ಯ ಶ್ರೀಹರಿಯು ಸೋದರ ಮಾವ. ಆದರೆ ಅಭಿಮನ್ಯುವಿಗೆ ಸಾವು ತಪ್ಪಿತೇನು? (ಭಾಗ್ಯ ತೆಗ್ಗಳಿ, ಬಿಜಾಪುರ).
13.ನಮಗಿಂತ ಹೆಚ್ಚು ತೊಂದರೆಯಲ್ಲಿರುವವರನ್ನು ನೆನೆಸಿಕೊಂಡರೆ ಮಾತ್ರ ನಾವು ಮನಸ್ಸಿಗೆ ನೆಮ್ಮದಿ ತಂದುಕೊಡು ಬದುಕಲು ಸಾಧ್ಯ ಎಂಬುದು ನಾನು ಜೀವನದಲ್ಲಿ ಕಂಡುಕೊಂಡ ಪಾಠ. (ಎಂ.ಜೆ. ನಾಗಲಕ್ಷ್ಮಿ, ಚಿಕ್ಕಮಗಳೂರು).
ಓದುಗರು ಸ್ವತಃ ಕಂಡುಂಡ ಬದುಕಿನ ವಾಸ್ತವ ಘಟನೆಗಳು, ಮನಸ್ಸನ್ನು ಘಾಸಿಗೊಳಿಸುವ ಪ್ರಸಂಗಗಳು ಇಲ್ಲಿವೆ. ಓದುಗರು ಲೇಖಕರಿಗಿಂತ ಜಾಣರು, ಹೆಚ್ಚು ಚಿಂತಿಸಬಲ್ಲರು, ಯಾರಾದರೂ ಪ್ರೇರೇಪಿಸಿದರೆ ಚೆನ್ನಾಗಿ ಬರೆಯಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಧಿ ಎಂಬುದು ಮೂರನೆಯ ವ್ಯಕ್ತಿ ಅಲ್ಲ. ದೇವರಿಗಿಂತ ಭಿನ್ನವಾದ ಶಕ್ತಿಯೂ ಅಲ್ಲ. ಅದೊಂದು ಜಗದ ಕಟ್ಟಳೆ.’ಹೇಮ ನಿನ್ನದಲ್ಲ, ಭೂಮಿ ನಿನ್ನದಲ್ಲ,ಕಾಮಿನಿ ನಿನ್ನವಳಲ್ಲ, ಇದು ಜಗಕಿಕ್ಕಿದ ವಿಧಿ, ನಿನ್ನೊಡವೆಯಂಬುದು ಜ್ಞಾನ ರತ್ನ!’ ಎನ್ನವ ಅಲ್ಲಮ ಪ್ರಭುಗಳ ಮಾತಿನಲ್ಲಿ ಇದನ್ನು ಕಾಣಬಹುದು. ವಿಧಿ ನಿಯಮ ದೇವರು ರೂಪಿಸಿದ ಬದುಕಿನ ಕಟ್ಟಳೆ (a divine law). It is the wish and will of God! ‘ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೇ ಎನ್ನ ವಶವೇ ಅಯ್ಯಾ?’ ಎನ್ನುತ್ತಾರೆ ಬಸವಣ್ಣನವರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ದೇಶಕ್ಕೂ ನಾಗರೀಕ ವಿಧಿ ನಿಷೇಧಗಳುಳ್ಳ ಒಂದು ಸಂವಿಧಾನ ಇರುವಂತೆ ದೇವರು ರೂಪಿಸಿದ ಜಗದ ಸಂವಿಧಾನವೇ ವಿಧಿ. ನೀವು ತಿಳಿದೋ ತಿಳಿಯದೆಯೋ ಮಾಡುವ ಎಲ್ಲ ಕಾರ್ಯಗಳೂ ಅದರಡಿಯಲ್ಲಿ ಬರುತ್ತವೆ. ಶ್ರೇಷ್ಠ ನ್ಯಾಯಾಲಯವು ಸಂವಿಧಾನದ ಯಾವುದೇ ನಿಯಮದ ಅಡಿಯಲ್ಲಿ ಏನೇ ಶಿಕ್ಷೆ ವಿಧಿಸಿದರೂ,ಮರಣದಂಡನೆಯನ್ನೇ ವಿಧಿಸಿದ್ದರೂ ರಾಷ್ಟ್ರಪತಿಯು ಕ್ಷಮಾದಾನ ನೀಡುವ ಅಧಿಕಾರ ಹೊಂದಿರುವಂತೆ ಈ ಜಗತ್ತಿನ ಒಡೆಯನಾದ ದೇವರು ತನ್ನನ್ನು ನಂಬಿದ ಭಕ್ತರನ್ನು ಕೈ ಹಿಡಿಯಬಲ್ಲ. ವಿಧಿಯು ದೇವರಿಗಿಂತ ಭಿನ್ನವಾದ ಶಕ್ತಿಯಾದರೆ ದೇವರು ಸರ್ವಶಕ್ತ All powerful, Omnipotent ಹೇಗಾಗಬಲ್ಲ? Vidhi is personified here. ವಿಧಿಯ ಆಟದ ಮುಂದೆ ಯಾರ ಆಟವೂ ನಡೆಯುವುದಿಲ್ಲ ಎನ್ನುವ ಮಾತಿನ ತಾತ್ಪರ್ಯವೇ: Nobody is above the divine law! (ಯಾರೂ ದೈವೀ ನಿಯಮಕ್ಕೆ ಅತೀತರಲ್ಲ!)
ಭವಿಷ್ಯದಲ್ಲಿ ಎಂತಹ ವಿಪತ್ತುಗಳು ಬಂದೊದಗುತ್ತವಯೆಂದು ಯಾರಿಂದಲೂ ನಿಖರವಾಗಿ ಹೇಳಲು ಬರುವುದಿಲ್ಲ. ಅವು ನಿಮ್ಮ ಕೈಯಲ್ಲಿ ಇಲ್ಲ . ಆದರೆ ಅವು ಬಂದಾಗ ಹೇಗೆ ಎದುರಿಸುವುದೆಂಬದು ಮಾತ್ರ ನಿಶ್ಚಿತವಾಗಿಯೂ ನಿಮ್ಮ ಕೈಯಲ್ಲಿದೆ. ಅದರಲ್ಲಿಯೇ ನಿಮ್ಮ ವ್ಯಕ್ತಿತ್ವದ ಹೊಳಪು ಕಾಣಿಸುವುದು.’ಇದು ನನ್ನ ಕರ್ಮ’ ಎಂದು ಗೊಣಗುವುದಕ್ಕಿಂತ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬ ಮನೋಧರ್ಮವನ್ನು ಬೆಳೆಸಿಕೊಂಡು ಅಂಜದೆ ಅಳುಕದೇ ಇದ್ದರೆ ಮಾತ್ರ ಮನುಷ್ಯ ಮನಃಶಾಂತಿಯನ್ನು ಪಡೆಯಲು ಸಾಧ್ಯ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com