Connect with us

Dvgsuddi Kannada | online news portal | Kannada news online

ಕೊರೊನಾದಿಂದ ನಾವು ಕಲಿಯಬೇಕಾದ ಪಾಠ ಏನು?

ಅಂಕಣ

ಕೊರೊನಾದಿಂದ ನಾವು ಕಲಿಯಬೇಕಾದ ಪಾಠ ಏನು?

-ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

ಇಂದು ಇಡೀ ಜಗತು ಒಂದು ಅಗ್ನಿಕುಂಡವಾಗಿ ಪರಿಣಮಿಸಿದೆ. ಕೊರೊನಾ ಮಹಾಮಾರಿಯ ಮೃತ್ಯು ಪಾಶದಲ್ಲಿ ಸಿಲುಕಿ ನಲುಗುತ್ತಿದೆ. ಇದಕ್ಕೆ ಸದ್ಯಕ್ಕೆ ಯಾವ ಲಸಿಕೆಯೂ ಇಲ್ಲ, ಸರಿಯಾದ ಔಷಧೋಪಚಾರವೂ ಇಲ್ಲ. ರೋಗ ತಗುಲಿದವರಷ್ಟೇ ಅಲ್ಲ ಇಡೀ ವೈದ್ಯಲೋಕವೇ ದಿಕ್ಕುಗಾಣದೆ ಬಸವಳಿದಿದೆ. ವಿಜ್ಞಾನಗಳು ಲಸಿಕೆಯನ್ನು ಕಂಡುಹಿಡಿಯಲು ಹರಸಾಹಸಪಡುತ್ತಿದ್ದಾರೆ. ಎಲ್ಲ ದೇಶಗಳ ಸರಕಾರಗಳು ಏನು ಮಾಡಲು ತೋಚದೆ ಅದಕ್ಕಾಗಿ ಕಾದು ಕುಳಿತಿವೆ. ವಿಶ್ವಾದ್ಯಂತ ಹರಡುತ್ತಿರುವ ಈ ಕೊರೊನಾ ವಿಷ ವೈರಾಣು ಶಿವಪುರಾಣದಲ್ಲಿ ಬರುವ ಸಮುದ್ರಮಥನದ ಕಥಾಪ್ರಸಂಗವನ್ನು ನೆನಪಿಗೆ ತರುತ್ತದೆ.

manthan

ದೇವತೆಗಳು ಮತ್ತು ರಾಕ್ಷಸರು ಮಂದರಗಿರಿಯನ್ನು ಕಡಗೋಲನ್ನಾಗಿಯೂ,ವಾಸುಕಿಯನ್ನು ಹಗ್ಗವನ್ನಾಗಿಯೂ. ಮಾಡಿಕೊಂಡು ಸಮುದ್ರಮಥನ ಮಾಡುವಾಗ ಮೊಟ್ಟ ಮೊದಲು ಹುಟ್ಟಿದ್ದು ಹಾಲಾಹಲ ವಿಷ. ಅದು ಇಡೀ ಜಗತ್ತನ್ನೇ ಆವರಿಸತೊಡಗಿತು ಎಂಬ ಈ ಶಿವಪುರಾಣದ ಕಥೆ ಈಗ ಪೌರಾಣಿಕ ಕಥೆಯಾಗಿ ಉಳಿದಿಲ್ಲ. ವಾಸ್ತವ ಸತ್ಯವಾಗಿ ಪರಿಣಮಿಸಿದೆ. ಕೊರೊನಾ ವೈರಾಣು ಇಂದು ಮಾನವತೆಗೆ ಹಾಲಾಹಲ ವಿಷವಾಗಿ ಪರಿಣಮಿಸಿದೆ. ದೇವತೆಗಳು ಮತ್ತು ದಾನವರು ಓಡಿಹೋಗಿ ಶಿವನ ಮೊರೆ ಹೊಕ್ಕಂತೆ ಈ ವಿಷ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಓಡುವುದಾದರೂ ಎಲ್ಲಿಗೆ ? ರಕ್ಷಕನಾದರೂ ಯಾರು? ದೀಪ ಧೂಪ ಹಚ್ಚಿದ್ದಾಯಿತು. ಗಂಟೆ ಜಾಗಟೆ ಬಾರಿಸಿದ್ದಾಯಿತು, ಹೋಮ ಹವನ ಮಾಡಿದ್ದಾಯಿತು. ಈ ಕೊರೊನಾ ಮಹಾಮಾರಿ ಎಲ್ಲ ದೇಶಗಳ ಸೀಮೋಲ್ಲಂಘನೆ ಮಾಡಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಪಾರು ಮಾಡುವವರು ಯಾರು? ನಮ್ಮ ಧಾರ್ಮಿಕ ನಂಬುಗೆಗಳನ್ನೇ ಬುಡಮೇಲು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭವನ್ನು ಕುರಿತೇ ಬಸವಣ್ಣನವರು ಹೇಳಿದ ಮಾತು:

ಒಲೆ ಹೊತ್ತಿ ಉರಿದೊಡೆ ನಿಲಬಹುದಲ್ಲದೆ
ಧರೆ ಹೊತ್ತಿ ಉರಿದೊಡೆ ನಿಲಬಾರದು.
ಏರಿ ನೀರುಣ್ಣೊಡೆ, ಬೇಲಿ ಕೆಯ್ಯ ಮೇವೊಡೆ,
ನಾರಿ ತನ್ನ ಮನೆಯಲ್ಲಿ ಕಳುವೊಡೆ,
ತಾಯ ಮೊಲೆವಾಲು ನಂಜಾಗಿ ಕೊಲುವೊಡೆ,
ಇನ್ನಾರಿಗೆ ದೂರುವೆ ಕೂಡಲ-ಸಂಗಮದೇವಾ!

ಅಡುಗೆಯ ಮನೆಯಲ್ಲಿ ಉರಿಯುತ್ತಿರುವ ಒಲೆಯ ಹತ್ತಿರ ನಿಂತುಕೊಳ್ಳಬಹುದು; ಚಳಿಗಾಲದಲ್ಲಿ ಒಲೆಯ ಬೆಂಕಿ ಶರೀರಕ್ಕೆ ಹಿತಕರವೂ ಆಗುತ್ತದೆ. ಆದರೆ ಇಡೀ ಭೂಮಂಡಲಕ್ಕೇ ಬೆಂಕಿ ಬಿದ್ದು ಉರಿಯತೊಡಗಿದರೆ ನಿಲ್ಲಲು ಸ್ಥಳವಾದರೂ ಎಲ್ಲಿ? ಕೆರೆಯ ನೀರನ್ನು ರಕ್ಷಣೆ ಮಾಡಬೇಕಾದ ಏರಿಯೇ ಕೆರೆಯ ನೀರನ್ನು ಕುಡಿಯತೊಡಗಿದರೆ ಏನು ಗತಿ ? ದನಕರುಗಳು.ನುಗ್ಗಿ ಬೆಳೆಯನ್ನು ಹಾಳುಮಾಡದಂತೆ ರಕ್ಷಣೆ ಮಾಡಬೇಕಾದ ಬೇಲಿಯೇ ಎದ್ದು ಬೆಳೆಯನ್ನು ತಿಂದು ಮುಗಿಸಿದರೆ ಏನು ಮಾಡುವುದು? ಮನೆಯಲ್ಲಿರುವ ಗೃಹಿಣಿಯೇ ಮನೆಯ ಸಾಮಗ್ರಿಗಳನ್ನು ಕದ್ದರೆ ಮನೆಯನ್ನು ರಕ್ಷಿಸುವವರು ಯಾರು? ಮಗುವನ್ನು ಪೋಷಿಸಬೇಕಾದ ತಾಯಿಯ ಎದೆಹಾಲೇ ವಿಷವಾಗಿ ಪರಿಣಮಿಸಿ ಮಗು ಸತ್ತು ಹೋದರೆ ಯಾರನ್ನು ದೂಷಿಸುವುದು ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಈ. ಅವಾಸ್ತವ ಕಲ್ಪನೆಗಳ ಹಿಂದಿರುವ ಅವರ ಆಶಯ ಮನುಷ್ಯನ ಅಸಹಾಯಕತೆ. ಕೆರೆಯ ನೀರನ್ನು ಏರಿ ಕುಡಿಯುವುದಾಗಲೀ, ಬೇಲಿ ಎದ್ದು ಬೆಳೆಯನ್ನು ಮೇಯುವುದಾಗಲೀ, ತಾಯಿಯ ಎದೆಹಾಲು ಮಗುವನ್ನು ಕೊಲ್ಲುವುದಾಗಲೀ, ಎಂದೂ ಸಾಧ್ಯವಿಲ್ಲ. ಹಾಗೆಯೇ ನಂಬಿದವರನ್ನು ದೇವರು ಎಂದೂ ಕೈ ಬಿಡಲಾರ ಎಂಬ ಅಪರಿಮಿತವಾದ. ದೈವೀ ಭಕ್ತಿ ಈ ವಚನದಲ್ಲಿ ಅಡಗಿದೆ.

basavanna

ಜನರು ತಮಗೆ ಬಂದೊದಗುವ ತೊಂದರೆಗಳಿಗೆಲ್ಲಾ ವಿಧಿಯೇ ಕಾರಣವೆಂದು ಹಲುಬುತ್ತಾರೆ. ಅದು ಸರಿಯಲ್ಲ. ಏಕೆಂದರೆ ನಿಮ್ಮ ತಪ್ಪುಗಳಿಗಾಗಿ ವಿಧಿಯನ್ನು ಹೇಗೆ ಹೊಣೆಗಾರನನ್ನಾಗಿ ಮಾಡುತ್ತೀರಿ ? ವಿಧಿಯೆಂಬುದು ನಿಮ್ಮ ಬುದ್ದಿ ಮತ್ತು ತರ್ಕಕ್ಕೆ ನಿಲುಕದ್ದು. ಅದನ್ನು ನೀವು ತಾರ್ಕಿಕವಾಗಿ ವಿವರಿಸಲು ಸಾಧ್ಯವಿಲ್ಲ. ಅದು ಹೇಗೆ ಸಂಭವಿಸಿತು ಎಂದು ಹೇಳಬಲ್ಲಿರೇ ಹೊರತು ಏಕೆ ಸಂಭವಿಸಿತು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದು ನಿಮ್ಮ ಗ್ರಹಿಕೆಗೆ ನಿಲುಕಲಾರದು. ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡಿದ್ದರೆ ಅದರ ಫಲವನ್ನು ನೀವು ಉಣ್ಣಲೇಬೇಕು. ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವು ನಿರ್ದಿಷ್ಟ ಘಟನೆಗಳು ನಡೆದೇ ಬಿಡುತ್ತವೆ. ಭವಿಷ್ಯದಲ್ಲಿ ನಡೆಯುವುದನ್ನು ಎಷ್ಟೇ ಪ್ರಯತ್ನ ಪಟ್ಟರೂ ತಪ್ಪಿಸಲು ಸಾಧ್ಯವಾಗುವುದಿಲ್ಲ. ಸಾವೆಂಬುದು ಪ್ರತಿಯೊಬ್ಬರೂ ಭಯಪಡುವ ಅಂತಹ ಒಂದು ಅನಿವಾರ್ಯ ಸ್ಥಿತಿ ! ಅದಕ್ಕೆ ಬಸವಣ್ಣನವರು ಹೇಳುವುದು:

ಅಂಜಿದಡಾಗದು, ಅಳುಕಿದಡಾಗದು ವಜ್ರ ಪಂಜರದೊಳಗಿದ್ದಡಾಗದು, ತಪ್ಪದುವೋ ಲಲಾಟ-ಲಿಖಿತ !

ಸಾವಿಗೆ ಅಂಜಿ ವಜ್ರದ ಕವಚವನ್ನು ಧರಿಸಿದರೆ ಸಾವು ಬಿಡದು. ಗುಂಡೇಟೆನಿಂದ ರಕ್ಷಣೆ ಪಡೆಯಲು ಬುಲೆಟ್‌ ಪ್ರೂಫ್ ಜಾಕೆಟ್‌ ಧರಿಸಬಹುದು. ಆದರೆ ಸಾವಿನಿಂದ ರಕ್ಷಣೆ ಸಿಗಬಹುದಾದ ಮರಣ ನಿರೋಧಕ ದಿರಿಸು ಇಲ್ಲ. ಕೊರೊನಾ ವೈರಾಣುವಿನಿಂದ ರಕ್ಷಿಸುವ ಪಿಪಿಇ ಕಿಟ್‌ ಇದೆಯೇ ಹೊರತು ಸಾವಿನಿಂದ ರಕ್ಷಣೆ ನೀಡುವ ಪಿಪಿಇ ಕಿಟ್‌ ಇನ್ನೂ ತಯಾರಾಗಿಲ್ಲ. ಒಂದು ಪಕ್ಷ ತಯಾರಾದರೂ ಯಾವುದೋ ಒಂದು ಹಂತದಲ್ಲಿ ಮನುಷ್ಯ ಬದುಕಲು ಬೇಸತ್ತು ‘ಸಾಕಪ್ಪಾ ದೇವರೇ’ ಎಂದು ಸಾಯಲು ಬಯಸಿದರೆ ಆಶ್ಚರ್ಯ ಪಡಬೇಕಾಗಿಲ್ಲ .

ಕೊರೊನಾ ಇಲ್ಲದ ಕಾಲದಲ್ಲಿ ಜನರು ಸುಖವಾಗಿದ್ದರೆ ? ಖಂಡಿತಾ ಇಲ್ಲ. ಹೊರಗೆ ದುಡಿಯಲು ಹೋಗುತ್ತಿದ್ದರು. ಬರುತ್ತಿದ್ದುದು ತಡರಾತ್ರಿಯೇ. ಅವರು ಮನೆಗೆ ಬರುವ ಹೊತ್ತಿಗೆ. ಮಕ್ಕಳು ಮಲಗಿರುತ್ತಿದ್ದರು.ಬೆಳಗ್ಗೆ ಮಕ್ಕಳು ಏಳುವ ಮೊದಲೇ ಕೆಲಸಕ್ಕೆ ಹೋಗುತ್ತಿದ್ದರು. ಕುಟುಂಬದೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದುದು ಕಡಿಮೆಯೇ! ಪಾಶ್ಚಿಮಾತ್ಯ ದೇಶಗಳಲ್ಲಂತೂ ದೇವರೇ ಬಂದರೂ ಭೇಟಿಯಾಗಲು ವಾರಾಂತ್ಯದವರೆಗೂ ಕಾಯಬೇಕು ಎನ್ನುತ್ತಿದ್ದರು. ಕೋವಿಡ್‌ ಕಾರಣದಿಂದ ಈಗ ಪರಿಸ್ಥಿತಿ ಬದಲಾಗಿದೆ. ಆಫೀಸುಗಳಿಗೆ ಹೋಗುವಂತಿಲ್ಲ. ಆದರೆ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲೇ ಇರಲು ಅವಕಾಶವಾದರೂ ಬೇಸರ ಉಂಟಾಗಿ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಏಕೆ ?

corona

ಮೊನ್ನೆ ಇಂಗ್ಲೆಂಡಿನಲ್ಲಿರುವ ನಮ್ಮ ಶಿಷ್ಯರೊಬ್ಬರು ಕರೆ ಮಾಡಿ ಮಾತನಾಡಿದರು. ಆ ದೇಶದಲ್ಲಿರುವ ಕೊರೊನಾದ ಸ್ಥಿತಿಗತಿಗಳನ್ನು ಅವರು ವಿವರಿಸಿದರು. ಈಗ ಅಲ್ಲಿ ವಿಶ್ವ ವಿದ್ಯಾನಿಲಯಗಳನ್ನು ಪುನರಾರಂಭ ಮಾಡಿರುವುದು ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದೆ. ಉದಾಹರಣೆಗೆ ನ್ಯೂಕ್ಯಾಸೆಲ್‌ನಲ್ಲಿರುವ ಎರಡು ವಿಶ್ವವಿದ್ಯಾನಿಲಯಗಳು ಆರಂಭಗೊಂಡ ನಂತರ ಬೇರೆ ಬೇರೆ ಕಡೆಗಳಿಂದ ಬಂದ ವಿದ್ಯಾರ್ಥಿಗಳು ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿ ತಿರುಗಾಡುತ್ತಿರುವ ಕಾರಣ ಕೋವಿಡ್ ಹಬ್ಬುತ್ತಿದೆ. ವಿದ್ಯಾಪ್ರಸಾರ ಮಾಡಬೇಕಾಗಿದ್ದ ವಿಶ್ವವಿದ್ಯಾನಿಲಯಗಳು ಈಗ ಕೋವಿಡ್ ಪ್ರಸಾರ ಮಾಡುತ್ತಿವೆ! ಹೀಗಾಗಿ ವಿಶ್ವವಿದ್ಯಾನಿಲಯಗಳು ಇರುವ ಪ್ರದೇಶಗಳಲ್ಲಿ ಈಗ ಎರಡನೆಯ ಬಾರಿಗೆ ಲಾಕ್ ಡೌನ್ ಮಾಡಲಾಗಿದೆ. ಯಾರೂ ಮನೆಗಳಿಂದ ಹೊರಗೆ ಬರುವಂತಿಲ್ಲ.

corona 1

ಕೊರೊನಾ ಮನುಷ್ಯರಿಗೆ ಬರುತ್ತದೆಯೇ ಹೊರತು ಪ್ರಾಣಿಗಳಿಗಲ್ಲ. ರೈತರು ಹೊಲದಲ್ಲಿ ಉಳುಮೆ ಮಾಡುವಾಗ ಎತ್ತುಗಳಿಗೆ ‘ಬಾಯಿಕುಕ್ಕೆ ‘ಹಾಕುತ್ತಾರೆ. ಈಗ ರೈತರೇ ಏಕೆ ಎಲ್ಲರೂ ಬಾಯಕುಕ್ಕೆ’ ಹಾಕಿಕೊಳ್ಳಬೇಕಾಗಿದೆ. ಕೊರೊನಾ ವೈರಾಣು ಮನುಷ್ಯರ ಆಶ್ರಯವಿಲ್ಲದೆ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಆದರೆ ತನಗೆ ಆಶ್ರಯ ನೀಡಿದವರ ವಿರುದ್ಧವೇ ಸಂಚು ಮಾಡುವ ಮನುಷ್ಯನ ಹೀನ ಪ್ರವೃತ್ತಿ ಈ ಕೊರೊನಾಕ್ಕೂ ಅಂಟಿಕೊಂಡಿರುವಂತೆ ತೋರುತ್ತದೆ. ಇದಕ್ಕೆಲ್ಲಾ ಕಾರಣ ಜನರಲ್ಲಿ ಸ್ವಯಂ ಶಿಸ್ತು ಮತ್ತು ಆತ್ಮಸಂಯಮದ ಕೊರತೆ. ಶಿವಮೊಗ್ಗದ ಸಮೀಪವಿರುವ ತುಂಗಾ ತೀರದ ಸೂಗೂರು ನಮ್ಮ ಪೂರ್ವಾಶ್ರಮದ ಹುಟ್ಟೂರು. ಅಲ್ಲಿಗೆ ಕೋವಿಡ್‌ ಕಳೆದ ತಿಂಗಳು ದಾಳಿ ಮಾಡಿತು. ಒಂದೇ ವಾರದಲ್ಲಿ 12 ಜನರನ್ನು ಬಲಿ ಪಡೆಯಿತು. ನಮಗೆ ವಿಷಯ ತಿಳಿದೊಡನೆಯೇ ಊರಿನ ಹಿರಿಯರಿಗೆ ಫೋನ್‌ ಮಾಡಿ ಕೋವಿಡ್‌ ಎದುರಿಸಲು ಏನು ಮಾಡುತ್ತೀರೆಂದು ಕೇಳಿದಾಗ ಅವರಿಂದ ಬಂದ ಉತ್ತರ, “ಬುದ್ದೀ, ನಾಳೆ ದೇವರನ್ನು ಹೊರಡಿಸಿ ಅಪ್ಪಣೆ ಕೇಳುತ್ತೇವೆ. ದೇವರು ಅಪ್ಪಣೆ ಕೊಟ್ಟಂತೆ ಮಾಡುತ್ತೇವೆ!” ದೇವರ ಮೇಲಿನ ಅವರ ಶ್ರದ್ಧಾಭಕ್ತಿಯನ್ನು ಪ್ರಶ್ನೆ ಮಾಡದೆ ಅವರಿಗೆ ಹೇಳಿದ ನಮ್ಮ ಹಿತನುಡಿ: “ದೇವರನ್ನು ಹೊರಡಿಸಬೇಕೆಂದರೆ ಪಲ್ಲಕ್ಕಿಯನ್ನು ಹೊರಬೇಕು. ಆಗ ಅಕ್ಕ ಪಕ್ಕದಲ್ಲಿ ನಿಲ್ಲಬೇಕು. ಅಂದರೆ ಸಾಮಾಜಕ ಅಂತರ ಇರುವುದಿಲ್ಲ! ಅದರಿಂದ ಅಪಾಯವೇ ಹೆಚ್ಚು. ದೇವರ ಅಪ್ಪಣೆ ಕೇಳುವುದಕ್ಕಿಂತ ಅದೇ ದೇವರು ನಿಮಗೆ ಕೊಟ್ಟ ಬುದ್ಧಿಯನ್ನು ಬಳಸಿಕೊಳ್ಳಿ. ಇಡೀ ಊರನ್ನು 20 ದಿನಗಳ ಕಾಲ ಲಾಕ್ ಡೌನ್ ಮಾಡಿರಿ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಬಿಡಿ, ಬೇರೆ ಊರಿನ ನಂಟರಿಷ್ಟರು ನಿಮ್ಮೂರಿಗೆ ಬರದಂತೆ ಯಾರೂ ಪಕ್ಕದ ಮನೆಗೂ ಹೋಗದಂತೆ, ಯಾರು ಪಕ್ಕದ ಊರಿಗೆ ಹೋಗದಂತೆ, ಪಕ್ಕದ ಮನೆಗೂ ಹೋಗದಂತೆ ದಿಗ್ಬಂಧನ ವಿಧಿಸಿಕೊಳ್ಳಿ. ಬೀದಿಗೆ ಇಳಿಯದೆ ಮನೆಯಲ್ಲಿಯೇ ಇರಿ ನಮ್ಮ ಈ ಬುದ್ದಿ ಮಾತನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲಿಸಿದರು. ಈಗ ವೈರಾಣು ಸಂಪೂರ್ಣ ನಿಯಂತ್ರಣಕ್ಕೆ ಬಂದು ಗ್ರಾಮ ತಣ್ಣಗಿದೆ! ಇದೇ ರೀತಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿಯಲ್ಲಿಯೂ ಈ ತಿಂಗಳ ಆರಂಭದಲ್ಲಿ ಹತ್ತಾರು ಸಾವುಗಳು ಸಂಭವಿಸಿದವು. ಇಲ್ಲಿಯೂ ಗ್ರಾಮದ ಹಿರಿಯರಿಗೆ ತಿಳಿಹೇಳಿ ಲಾಕ್‌ಡೌನ್‌ ಜಾರಿಗೊಳಿಸಿದ ಮೇಲೆ ಕೊರೊನಾ ನಿಯಂತ್ರಣಕ್ಕೆ ಬಂದಿದೆ.

ಕೊರೊನಾ ಕಲಿಸಿದ ಪಾಠ ಏನು? ಹೊಸದಾಗಿ ಏನೂ ಇಲ್ಲ, ಎಲ್ಲ ಧರ್ಮಗಳ ಪವಿತ್ರ ಗ್ರಂಥಗಳು ಬೋಧಿಸಿದ್ದನ್ನೇ ನೆನಪು ಮಾಡಿಕೊಟ್ಟಿದೆ ಅಷ್ಟೆ. ಜಗತ್ತಿನಲ್ಲಿ ಅದೆಷ್ಟು ಧರ್ಮೋಪದೇಶ,ಪ್ರವಚನಗಳನ್ನು ಮಾಡಲಾಗಿದೆ. ಅದೆಷ್ಟು ಜನ ಸಾಧು ಸಂತರು, ದ್ರಷ್ಟಾರರು, ಯಷಿಮುನಿಗಳು ಕಾಲ ಕಾಲಕ್ಕೆ ಬಂದು ಜನರ ಬದುಕನ್ನು ಹಸನುಗೊಳಿಸಲು ಶ್ರಮಿಸಿದ್ದಾರೆ! ಅದರೆ ಜನರು ಅವರ ಹಿತೋಪದೇಶಗಳನ್ನು ಪಾಲಿಸಿದ್ದಾರೆಯೇ? ಈಗ ಪಾಲಿಸುತ್ತಿದ್ದಾರೆಯೇ? ಇದೇ ಅಧುನಿಕ ಪ್ರಪಂಚದ ಮುಂದಿರುವ ಯಕ್ಷಪ್ರಶ್ನೆ ! ಮುಖಕ್ಕೆ ಮಾಸ್ಕ್‌ ಧರಿಸದೇ ಇದ್ದರೆ ಸರಕಾರ ದಂಡ ವಿಧಿಸುತ್ತದೆ ಎನ್ನುವೆ ಆಸಹನೆಗಿಂತ ಕೊರೊನಾ ‘ತಲೆದಂಡ’ ವಿಧಿಸುತ್ತದೆ ಎಂಬ ಒಳ ಎಚ್ಚರ ಇರಲಿ!

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

ದಾವಣಗೆರೆ

Advertisement
Advertisement Enter ad code here

Title

To Top