ಬೆಂಗಳೂರು: ಕಳೆದ ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಟೊಮೆಟೋ ಉತ್ಪಾದನೆ ಕುಂಠಿತವಾಗಿದ್ದು, ಏಕಾಏಕಿ ಬೇಡಿಕೆ ಹೆಚ್ಚಳವಾಗಿದ್ದು, ಸದ್ಯ ಕೆಜಿಗೆ 40 ರಿಂದ 60 ರೂಪಾಯಿ ಇರುವ ಬೆಲೆ 100 ರೂಪಾಯಿಗೆ ಏರಿಕೆಯಾದ್ರೂ ಆಚ್ಚರಿಪಡಬೇಕಿಲ್ಲ.
ಸೆಪ್ಟೆಂಬರ್ ತಿಗಳಿಂತ ಮುನ್ನ 5ರಿಂದ 6 ರೂಪಾಯಿದ್ದ ಬೆಲೆ, ನಂತರ ಕೆ.ಜಿಗೆ 10 ರೂಪಾಯಿ ಆಗಿತ್ತು. ಕೊನೆಗೆ ಕೆ.ಜಿಗೆ ಗರಿಷ್ಠ 15 ರೂಗೆ ತಲುಪಿತ್ತು. ಇದೀಗ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಮಳೆಯಿಂದ ಸರಿಯಾದ ಪೂರೈಕೆ ಆಗುತ್ತಿಲ್ಲ. ಇನ್ನು ಹೆಚ್ಚಿನ ಪ್ರಮಾಣ ಟೊಮೆಟೋ ಜಮೀನಲ್ಲಿಯೇ ಕೊಳೆತು ಹೋಗುತ್ತಿದೆ. ಇದರಿಂದ ಹಠಾತ್ ಬೆಲೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಟೆಮೆಟೋ ಬೆಳೆಯಲಾಗುತ್ತಿದೆ. ಇಲ್ಲಿ ನಿರಂತರ ಮಳೆಯಾಗಿದ್ದು, ಕಡಿಮೆ ತಾಪಮಾನದಿಂದಾಗಿ ಟೊಮೆಟೊ ಬೆಳೆಗೆ ತೀವ್ರ ಹೊಡೆತ ಬಿದ್ದಿದೆ. ನಿರಂತರ ಮಳೆಯಿಂದಾಗಿ ಟೊಮೆಟೊ ಬೆಳೆಯಲು ಸಾಧ್ಯವಾಗಿಲ್ಲ. ಮಳೆ ಪರಿಸ್ಥಿತಿಯಿಂದಾಗಿ ಶೇ 50ರಷ್ಟು ಉತ್ಪಾದನೆ ಕುಂಠಿತವಾಗಿದೆ.
ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 30 ರೂ ಬೆಲೆಯಿಂದ ಗರಿಷ್ಠ 70ರೂ ಬೆಲೆವರೆಗೂ ಮಾರಾಟವಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದ್ರೆ, 100 ರೂ ವರೆಗೆ ಏರಿಕೆಯಾದ್ರೂ ಅಚ್ಚರಿ ಪಡಬೇಕಿಲ್ಲ.



