ದಾವಣಗೆರೆ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ತೋಟಗಾರಿಕೆ ಬೆಳೆಗಳಲ್ಲಿ ಮುನ್ನಚ್ಚರಿಕೆಯ ಕ್ರಮಗಳನ್ನು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಎಂ.ಜಿ. ತಿಳಿಸಿದ್ದಾರೆ.
ಅಡಿಕೆ ತೋಟಗಳಲ್ಲಿ ಅತೀಯಾದ ತೇವಾಂಶದಿಂದ ಹರಳು ಕಟ್ಟಿರುವ ದೊಡ್ಡ ಕಾಯಿಗಳು ಉದುರುತ್ತಿರುವುದು ಕಂಡು ಬಂದಿದೆ. ಅಂತಹ ತೋಟಗಳಲ್ಲಿ ತಾತ್ಕಾಲಿಕವಾಗಿ ಬಸಿಗಾಲುವೆಗಳನ್ನು ತೆಗೆದು ನೀರನ್ನು ಹೊರಗೆ ಹಾಕಬೇಕು. ಸಮಸ್ಯೆ ತೀವ್ರವಾಗಿದ್ದರೆ ಮಳೆ ಕಡಿಮೆಯಾದ ಮೇಲೆ ಹೆಕ್ಸಾಕೊನೋಜೋಲ್ 1 ಮಿ.ಲೀ., ಲಘು ಪೋಷಕಾಂಶದ ಮಿಶ್ರಣ 5 ಮಿಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿ, ಸಣ್ಣ ಗಿಡಗಳಲ್ಲಿ ಕೊಳೆ ರೋಗದ ಭಾದೆ ಹೆಚ್ಚಾಗುವ ಸಂಭವವಿದ್ದು ಮುನ್ನೆಚ್ಚರಿಕೆಯಾಗಿ ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ಜಿಲ್ಲೆಯ ನ್ಯಾಮತಿ ಮತ್ತು ಜಗಳೂರು ತಾಲ್ಲೂಕಿನಲ್ಲಿ ಸುಮಾರು 1750 ಹೆ. ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು ಬೆಳೆ 30-45 ದಿವಸಗಳ ಹಂತದಲ್ಲಿದೆ. ಈ ಸಂದರ್ಭದಲ್ಲಿ ತೇವಾಂಶ ಹೆಚ್ಚಾದರೆ ನೇರಳೆ ಎಲೆ ಮಚ್ಚೆ ರೋಗ ಬರುವ ಸಂಭವವಿರುವುದರಿಂದ ಪ್ರೋಪಿಕೊನೊಜೋಲ್ 1 ಮಿಲೀ, ಕ್ಯಾಲ್ಸಿಯಂ ನೈಟ್ರೇಟ್ 2 ಗ್ರಾಂ. ಲಘು ಪೋಷಕಾಂಶ, 4 ಮಿಲೀ. ಪತ್ರೀ ಲೀಟರ್‌ಗೆ ಬೆರಸಿ ಸಿಂಪಡಿಸಿ.
ಬಾಳೆ ಬೆಳೆಯಲ್ಲಿ ಪನಾಮ ಸೊರಗು ರೋಗದ ನಿಯಂತ್ರಣಕ್ಕೆ ಕಾರ್ಬಂಡೈಜಿಮ್ 2 ಗ್ರಾಂ, 19:19:19 @ 5 ಗ್ರಾಂ. ಪತ್ರೀ ಲೀಟರ್ ನೀರಿಗೆ ಬೆರಸಿ ಪ್ರತೀ ಗಿಡದ ಬುಡಕ್ಕೆ 2 ಲೀಟರ್ ದ್ರಾವಣವನ್ನು ಹಾಕಬೇಕು.
ಹೆಚ್ಚಿನ ಮಾಹಿತಿಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಸಮೀಪದ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕೆಂದು ಕೇಂದ್ರದ ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್. ರವರು ತಿಳಿಸಿದ್ದಾರೆ.