ದಾವಣಗೆರೆ: ರಾಗಿ ಬೆಂಬಲ ಬೆಲೆಯನ್ನು ಸರ್ಕಾರ ಕ್ವಿಂಟಾಲ್‌ಗೆ 201 ರೂ. ಹೆಚ್ಚಳ ಮಾಡಿದ್ದು, ಇದೀಗ ಪ್ರತಿ ಕ್ವಿಂಟಾಲ್ ರಾಗಿ ಬೆಲೆ 3,578 ರೂ. ನಿಗದಿಯಾಗಿದೆ.
ಡಿ. 15ರಿಂದ 31ರವರೆಗೆ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2023ರ ಜನವರಿ 1ರಿಂದ ಮಾರ್ಚ್ 31ರವರೆಗೆ ಖರೀದಿ ನಡೆಯಲಿದೆ. ಜಿಲ್ಲೆಯ ಐದು ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ‘ಫ್ರೂಟ್ಸ್’ ಐ.ಡಿಯಿಂದ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು ಎಪಿಎಂಸಿ ಖರೀದಿ ಕೇಂದ್ರಗಳಲ್ಲಿ ಖರೀದಿ ನಡೆಯಲಿದೆ. ಭತ್ತ ಮತ್ತು ರಾಗಿ ಮಾತ್ರ ಖರೀದಿ ನಡೆಯಲಿದೆ. ರಾಗಿಯನ್ನು ಪ್ರತಿ ಎಕರೆಗೆ ಗರಿಷ್ಠ 25 ಕ್ವಿಂಟಾಲ್ ನಂತೆ ಒಬ್ಬ ರೈತರಿಂದ ಗರಿಷ್ಠ 40 ಕ್ವಿಂಟಲ್‌ವರೆಗೆ ಖರೀದಿ ಮಾಡಲು ಅವಕಾಶ ಇದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಮಾತ್ರ ರಾಗಿ ಮಾರಾಟ ಮಾಡಬಹುದಾಗಿದೆ.ರಾಜ್ಯದಲ್ಲಿ 5 ಲಕ್ಷ ಟನ್ ಭತ್ತ, 5 ಲಕ್ಷ ಟನ್ ರಾಗಿ ಖರೀದಿಸಲು ಮಾತ್ರ ಅವಕಾಶ ಇರುವುದರಿಂದ ಜಿಲ್ಲೆಯ ರೈತರು ಕೂಡಲೇ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆಯ ಪ್ರಯೋಜನ ಪಡೆದುಕೊಳ್ಳಬೇಕಿದೆ.