ತರಳಬಾಳು ಶ್ರೀ ಆಶೀರ್ವಾದ ಪಡೆದ ನಟ ಶಿವಣ್ಣ; ರಾಜ್ ಕುಮಾರ್, ಪುನೀತ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮಠದೊಂದಿಗಿನ ಬಾಂಧವ್ಯದ ನೆನಪು ಹಂಚಿಕೊಂಡ ಶ್ರೀಗಳು..

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಸಿರಿಗೆರೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಮತ್ತು ಪತಿ, ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ, ಐಕ್ಯ ಮಂಟಪದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.

ನಂತರ ಪರಮ ಸದ್ಧರ್ಮ ನ್ಯಾಯ ಪೀಠಕ್ಕೆ ಆಗಮಿಸಿ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಭಕ್ತಿ ಸಮರ್ಪಿಸಿ, ಪೂಜ್ಯರಿಂದ
ತರಳಬಾಳು ಪ್ರಸಾದ ಸ್ವೀಕರಿಸಿ ಕೃಪಾಶೀರ್ವಾದ ಪಡೆದರು.

ದಂಪತಿಗಳನ್ನು ಹರಿಸಿ ಆಶೀರ್ವಚನ ನೀಡಿದ ಶ್ರೀಜಗದ್ಗುರುಗಳು ಗೀತಾ ಶಿವರಾಜ್ ಕುಮಾರ್ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಠದ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿದವರು. ಹತ್ತಾರು ಬಾರಿ ಮಠಕ್ಕೆ, ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಾವು ಮತ್ತು ಬಂಗಾರಪ್ಪನವರು ಶಿವಮೊಗ್ಗದಲ್ಲಿ ಜೊತೆಯಾಗಿ ಸಂಗೀತ ಅಭ್ಯಾಸ ಮಾಡಿದವರು. ಎಂದು ಶ್ರೀಗಳು ಹಳೆಯ ಬಾಂಧವ್ಯ ಹಂಚಿಕೊಂಡರು.

ಶಿವಣ್ಣನಿಗೆ ರಾಜ್ ಕುಮಾರ್ ಮತ್ತು ಪುನೀತ್ ಮಠಕ್ಕೆ ಭೇಟಿದ ಸಂದರ್ಭ ವಿವರಿಸಿದ ಶ್ರೀ: ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮಠಕ್ಕೆ ಆಗಮಿಸಿರುವುದಾಗಿ ತಿಳಿಸಿದಾಗ, 1983 ರಲ್ಲಿ ನಿಮ್ಮ ತಂದೆಯವರು ವರನಟರಾದ ಡಾ.ರಾಜ್ ಕುಮಾರ್ ರವರು ಬಾಲಕ ಪುನೀತ್ ರಾಜ್ ಕುಮಾರ್ ಜೊತೆ ಮಠಕ್ಕೆ ಆಗಮಿಸಿದ್ದರು. ಹಿರಿಯ ಗುರುಗಳಿಗೆ ಬಿನ್ನವತ್ತಳೆ ಸಮರ್ಪಿಸಿದ್ದರು. ನಮ್ಮ ಮಠ ಮತ್ತು ಗುರುಗಳ ಬಗ್ಗೆ ಅಪಾರ ಭಕ್ತಿ ಹೊಂದಿದವರು. ಅಂದು ಲಿಂಗೈಕ್ಯೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ಪೂಜ್ಯರ ಸಮ್ಮುಖದಲ್ಲಿ “ಕಾಣದಂತೆ ಮಾಯವಾದನು ನಮ್ಮ ಶಿವ”…. ಹಾಡನ್ನು ಹಾಡಿದ್ದ ಪುನೀತ ಪ್ರತಿಭೆಯನ್ನು ಕಂಡ ಪೂಜ್ಯದ್ವಯರು ಬೆಟ್ಟದ ಹೂವು ಭಾನೆತ್ತರಕ್ಕೆ ಬೆಳೆಯಲೆಂದು ಆಶೀರ್ವದಿಸಿದ್ದರು.

ಡಾ.ರಾಜ್ ಕುಟುಂಬದೊಡನೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ತರಳಬಾಳು ಕಲಾಸಂಘದ ಅಂದಿನ ಸಂಗೀತ ಉಪಾಧ್ಯಾಯರಾಗಿದ್ದ ರಾಜುಮೇಷ್ಟ್ರುರವರು ತರಳಬಾಳು ಮಠ ಮತ್ತು ರಾಜ್ ಕುಟುಂಬದ ಸಂಪರ್ಕ ಸೇತುವೆಯಾಗಿದ್ದರು. ಎಂದು ಶ್ರೀ ಜಗದ್ಗುರುಗಳವರು 40 ವರ್ಷಗಳ ಹಿಂದೆ ಡಾ.ರಾಜ್ ಕುಮಾರ್ ಆಗಮಿಸಿದ್ದ ಫೋಟೋ ಗಳನ್ನು ಶಿವರಾಜ್ ಕುಮಾರ್ ರವರಿಗೆ ತೋರಿಸಿದಾಗ ಶಿವರಾಜ್ ಕುಮಾರ್ ಮೊಗದಲ್ಲಿ ಆಶ್ಚರ್ಯ ಮತ್ತು ಸಂತೋಷ ಹುಕ್ಕಿ ಬಂದಿತು.

ಸ್ವಾತಂತ್ರ್ಯ ಪೂರ್ವದಿಂದಲೂ,ಶ್ರೀ ಮಠದ ಅನುಸರಣೆಯಲ್ಲಿರುವ ಸರ್ವಜಾತಿ ಏಕಪಂಕ್ತೀ ಪ್ರಸಾದದ ವ್ಯವಸ್ಥೆಯನ್ಶು ಕಂಡು ಮುಕ್ತಕಂಠದಿಂದ ಡಾ . ರಾಜ್ ಪ್ರಶಂಸಿದ್ದರು. ಶ್ರೀ ಬೃಹನ್ಮಠದ ಪ್ರಸಾದದ ಒಂದು ಪ್ರಾಕಾರವಾದ ಉಪ್ಪಿನಕಾಯಿಯ ರುಚಿಗೆ ಮಾರುಹೋಗಿದ್ದ ವರನಟ ತಮ್ಮ ನಿವಾಸಕ್ಕೆ ಕೇಳಿ ಪಡೆದುಕೊಂಡು ಹೋಗಿದ್ದರು. ಎಂದು ಸಂತೋಷದಿಂದ ವಿಷಯ ಹಂಚಿಕೊಂಡರು.

ಆದರ್ಶ ಕುಟುಂಬದ ತಂದೆಯವರ ಮಾನವೀಯ ಗುಣ ತಾಯಿ ಹೃದಯದ ಸಹನೆ ಯಾವುದೇ ಸುದ್ದಿಗಳಿಗೆ ಆಹಾರವಾಗದೆ ಯಾರಿಗು ಅವಮಾನಿಸದ ಯಾರೊಂದಿಗು ದ್ವೇಷ ಬೆಳೆಸದ ವ್ಯಕ್ತಿತ್ವದ ನಗುಮಖದ ಪುನೀತ್ ರಾಜ್ ಕುಮಾರ್ ಕಳೆದುಕೊಂಡ ನೋವು ಎಲ್ಲರಿಗೂ ಇದೆ. ಅಪ್ಪು ಬೆಟ್ಟದ ಹೂವಿನೊಂದಿಗೆ ದೇವರ ಚರಣದಲ್ಲಿ ಲೀನವಾಗಿದ್ದಾರೆ. ಸರಳ, ಮುಗ್ಧ ಮನಸ್ಸಿನ ಪುನೀತ್ ರಾಜ್ ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ತರಂಗಕ್ಕೆ ಕಾಲಿಟ್ಟು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇಂತಹ ಪ್ರತಿಭಾವಂತ, ಸರಳ, ಮಾನವೀಯತೆಯನ್ನು ನಿಜ ಜೀವನದಲ್ಲಿ ಅಂತರ್ಗತವಾಗಿಸಿಕೊಂಡಿದ್ದ ನಟನನ್ನು 46ನೇ ವಯಸ್ಸಿನಲ್ಲಿಯೇ ಕಳೆದುಕೊಂಡಿರುವುದು, ಎಲ್ಲರಿಗೂ ನುಂಗಲಾಗರದ ಕ್ಷಣ ಎಂದು ಶ್ರೀ ಜಗದ್ಗುರುಗಳವರು ಅಭಿಪ್ರಾಯಪಟ್ಟರು.

ಚುನಾವಣೆಗಳು ಮಾರಿಹಬ್ಬದಂತೆ; ಪ್ರಸ್ತುತ ಚುನಾವಣೆಗಳ ಬಗ್ಗೆ ಮಾತನಾಡಿದ ಶ್ರೀ ಜಗದ್ಗುರುಗಳವರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗಿಂತ, ಇಂದು ದೇಶದ ಅಧಿಕಾರ ಗದ್ದುಗೆಯನ್ನು ಏರಲು ರಾಜಕೀಯ ಪಕ್ಷದ ಟಿಕೆಟ್ಟಿಗಾಗಿ ಹೋರಾಡು ಸಂಖ್ಯೆಯೇ ಜಾಸ್ತಿಯಾಗಿದೆ. ದೇಶ ಸೇವೆಗಿಂತ ಸ್ವಾರ್ಥ ಲಾಲಸೆ ಮೇರೆ ಮೀರಿ ಬೆಳೆದಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಈ (ವಾ)ನರರಿಗೆ ಸಾರ್ವಜನಿಕ ಜೀವನದಲ್ಲಿ ಸಹಜವಾಗಿ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದಾಗಿದೆ. ಇತ್ತೀಚಿನ ಚುನಾವಣೆಗಳನ್ನು ನೋಡಿದರೆ ಸ್ವತಃ ದೇವರೇ ಚುನಾವಣೆಗೆ ನಿಂತರೂ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.

ಚುನಾವಣೆಗಳು ಮಾರಿಹಬ್ಬಗಳಂತಾಗಿವೆ. ಜನರು ತಿಳಿದೂ ತಿಳಿದೂ ಹರಕೆಯ ಕುರಿಗಳಾಗುತ್ತಿದ್ದಾರೆ. ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಎಂಬಂತೆ ಮತದಾರರು ರಾಜಕಾರಣಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಮಾರಿಹಬ್ಬದ ದಿನ ಹರಕೆಯ ಕುರಿಗಳನ್ನು ಮೆರವಣಿಗೆ ಮಾಡುವಂತೆ ಅಭ್ಯರ್ಥಿಗಳು ಮತದಾರರನ್ನು ಓಲೈಸಿ ಮೆರೆಸುತ್ತಾರೆ. ಮತದಾನ ಮುಗಿದ ಮಾರನೆಯ ದಿನವೇ “ನೀನು ಯಾರೋ ಮತ್ತೆ ನಾನು ಯಾರೋ” ಎಂಬಂತಹ ಪರಿಸ್ಥಿತಿ! ನಿರ್ಮಾಣವಾಗಿದೆ ಎಂದು ಚುನಾವಣಾ ಸಂದರ್ಭಗಳನ್ನು ವಿಶ್ಲೇಷಿಸಿದರು.

ಪ್ರಜ್ಞಾವಂತ ಮತದಾರರೇ! ದೇಶದ ಜವಾಬ್ದಾರಿಯುತ ನಾಗರಿಕರಾಗಿ ತಪ್ಪದೆ ನಿಮ್ಮ ಮತ ಚಲಾಯಿಸಿರಿ. ಮತದಾನ ಮಾಡುವಾಗ ನಿಮ್ಮ ಕೈಬೆರಳಿಗೆ ಹಚ್ಚುವ ಮಸಿ ಒಂದು ತಿಂಗಳಲ್ಲಿ ಅಳಿಸಿ ಹೋಗಬಹುವು. ಆದರೆ ಅದು ಮುಂದಿನ ಐದು ವರ್ಷಗಳ ಕಾಲ ನಿಮ್ಮ ಮುಖಕ್ಕೆ ಮೆತ್ತಿದ ಮಸಿಯಾಗದಿರಲಿ. ನೀವು ಹಾಕುವ ಓಟು ತಾಯಂದಿರು. ಮಗುವಿನ ಹಾಲು ಗಲ್ಲದ ಮೇಲೆ ಪ್ರೀತಿಯಿಂದ ಇಡುವ ದೃಷ್ಟಿಬೊಟ್ಟಿನಂತಿರಲಿ! ಎಂದು ಸಂದೇಶ ಕರುಣಿಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕಿನ ಕಳೆದ ವಿಧಾನ ಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ನಾಗರಾಜ್ ಗೌಡ, ಸೊರಬ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಆನವಟ್ಟಿ ರುದ್ರಗೌಡ ಪಾಟೀಲ್, ಶಿಕಾರಿಪುರ, ಶಿವಮೊಗ್ಗದ ನೂರಾರು ಭಕ್ತರು ಹಾಜರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *