Connect with us

Dvgsuddi Kannada | online news portal | Kannada news online

ದಾವಣಗೆರೆ: ಅಂತೂ ಅಶೋಕ ರಸ್ತೆ ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ ಸಿಕ್ತು; ಅಂಡರ್ ಪಾಸ್ ನಿರ್ಮಾಣ ಶೀಘ್ರ ಆರಂಭ: ಜಿ.ಎಂ ಸಿದ್ದೇಶ್ವರ್

ದಾವಣಗೆರೆ

ದಾವಣಗೆರೆ: ಅಂತೂ ಅಶೋಕ ರಸ್ತೆ ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ ಸಿಕ್ತು; ಅಂಡರ್ ಪಾಸ್ ನಿರ್ಮಾಣ ಶೀಘ್ರ ಆರಂಭ: ಜಿ.ಎಂ ಸಿದ್ದೇಶ್ವರ್

ದಾವಣಗೆರೆ: ಬಹು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ದಾವಣಗೆರೆ ನಗರದ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ತೊಂದರೆಗೆ ಇದೀಗ ಪರಿಹಾರ ಕಂಡುಕೊಳ್ಳಲಾಗಿದ್ದು, ರೈಲ್ವೆ ಕೆಳಸೇತುವೆ ನಿರ್ಮಾಣ ಹಾಗೂ ರಸ್ತೆಯನ್ನು 60 ಅಡಿ ರಸ್ತೆಯಾಗಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಿ, ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.

ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಹಾಗೂ ರೈಲ್ವೆ ಯೋಜನೆಗೆ ಸಂಬಂಧಿತ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಾವಣಗೆರೆ ನಗರದ ಪ್ರಮುಖ ಜನನಿಬಿಡ ರಸ್ತೆಯಾಗಿರುವ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್‍ಗೆ ಎರಡು ಕಿಂಡಿಯ ಕೆಳ ಸೇತುವೆ ನಿರ್ಮಾಣ ಹಾಗೂ ಇಲ್ಲಿಂದ ಈರುಳ್ಳಿ ಮಾರ್ಕೆಟ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 60 ಅಡಿ ರಸ್ತೆಯನ್ನಾಗಿ ಅಗಲೀಕರಣಗೊಳಿಸಲು 35 ಕೋಟಿ ರೂ. ಗಳ ಯೋಜನೆ ರೂಪಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಒಟ್ಟುಯ 1.14 ಲಕ್ಷ ಚದುರಡಿ ಭೂವಿಸ್ತೀರ್ಣ ಬೇಕಾಗುವುದು. ಇದಕ್ಕಾಗಿ ಅಗತ್ಯವಿರುವ ಭೂ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಈಗಾಗಲೆ ಸಂಬಂಧಪಟ್ಟ ಭೂ ಮಾಲೀಕರು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ರಸ್ತೆ ಅಗಲೀಕರಣದಿಂದಾಗಿ ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ತಮ್ಮ ಉಳಿದ ಭೂಮಿಯ ಮೌಲ್ಯ ಸುಮಾರು ನಾಲ್ಕುಪಟ್ಟು ಹೆಚ್ಚಾಗಲಿದ್ದು, ಅವರಿಗೂ ನಿಯಮಾನುಸಾರ ಪರಿಹಾರ, ಕಟ್ಟಡಗಳಿದ್ದಲ್ಲಿ, ಅದಕ್ಕೂ ಮೌಲ್ಯಮಾಪನ ಮಾಡಿಸಿ, ಪರಿಹಾರ ಒದಗಿಸಲಾಗುವುದು. ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ, ಒಂದು ವರ್ಷದೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಸದರು ಹೇಳಿದರು.

ಚಿತ್ರದುರ್ಗ-ಹರಿಹರ ವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಬರುವ ಅಕ್ಟೋಬರ್ ಒಳಗೆ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ 03 ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಲು ಇನ್ನೂ 15 ತಿಂಗಳುಗಳ ಕಾಲಾವಕಾಶವನ್ನು ಅಧಿಕಾರಿಗಳು ಕೋರಿದ್ದಾರೆ. ದಾವಣಗೆರೆ ನಗರ ಪ್ರವೇಶಿಸುವ ರಾ.ಹೆ. ಮಾರ್ಗದಲ್ಲಿ ಚಿಂದೋಡಿ ಲೀಲಾ ರಂಗಮಂಟಪದ ಬಳಿ ರಸ್ತೆ ಕಿರಿದಾಗಿದ್ದು, ವಾಹನ ಸವಾರರಿಗೆ ಗೊಂದಲವಾಗುವಂತಿದೆ. ಈ ಪ್ರದೇಶದಲ್ಲಿ 03 ವಿಂಡೋ ರಸ್ತೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಬನಶಂಕರಿ ಲೇಔಟ್ ಬಳಿ ರಸ್ತೆ ಅಗಲೀಕರಣ, ಮಲ್ಲಶೆಟ್ಟಿಹಳ್ಳಿ, ಕಲ್ಪನಹಳ್ಳಿ ಬಳಿಯ ಹೈಟೆನ್ಷನ್ ವಿದ್ಯುತ್ ಮಾರ್ಗ ಸ್ಥಳಾಂತರ, ಹದಡಿ ರಸ್ತೆಯಲ್ಲಿ ವೃತ್ತ ನಿರ್ಮಾಣ, ಹಾಗೂ ಕುಂದುವಾಡ ಹತ್ತಿರ ಮೇಲ್ಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ, ದಾವಣಗೆರೆ ನಗರದ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ 60 ಅಡಿ ರಸ್ತೆ ಅಗಲೀಕರಣಕ್ಕೆ ಅಗತ್ಯ ಭೂಮಿಯನ್ನು ಒದಗಿಸಲು ಭೂ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಭೂ ಮಾಲೀಕರಿಗೆ ಅನ್ಯಾಯವಾಗದಂತೆ ಅವರಿಗೆ ಪರಿಹಾರ ಒದಗಿಸಲಾಗುವುದು ಎಂದರು.ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top