ರೈತರ ಕೃಷಿ ಯಂತ್ರಗಳಿಗೆ ಡೀಸೆಲ್ ಸಹಾಯಧನ ನೀಡುವ ‘ರೈತ ಶಕ್ತಿ’ ಯೋಜನೆಗೆ ಚಾಲನೆ; ಬಜೆಟ್‍ನಲ್ಲಿ ರೈತರಿಗೆ ವಿಶೇಷ ಆದ್ಯತೆ-ಸಿಎಂ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಧಾರವಾಡ: ರಾಜ್ಯಸರ್ಕಾರವು ವಿಶೇಷ ಯೋಜನೆಗಳ ಮೂಲಕ ರೈತರ ಮತ್ತು ಕೃಷಿ ಕೂಲಿ ಕಾರ್ಮಿಕರ ಅಭಿವೃದ್ಧಿಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಅನುದಾನ, ಶಿಷ್ಯವೇತನ, ಪರಿಹಾರಗಳ ಮೂಲಕ ರೈತರಿಗೆ ಶಕ್ತಿ ತುಂಬಲಾಗುತ್ತಿದೆ. ಈಗ ರೈತ ಶಕ್ತಿ ಎಂಬ ನೂತನ ಯೋಜನೆಯೊಂದಿಗೆ ಕೃಷಿ ಮತ್ತು ಕೃಷಿಕರ ಅಭಿವೃದ್ಧಿಗೆ ಸರ್ಕಾರವು ಶ್ರಮಿಸುತ್ತಿದ್ದು, ರೈತರ ಅಭಿವೃದ್ಧಿಗೆ ಬದ್ದವಾಗಿದ್ದು, ಬರುವ ಬಜೆಟ್‍ನಲ್ಲಿ ರೈತರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜರುಗಿದ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ರಾಜ್ಯಸರ್ಕಾರವು ರೈತ ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ 05 ಎಕರೆಗೆ ರೂ.1250 ಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹ ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸೆಲ್‍ಗೆ 51.80 ಲಕ್ಷ ಫಲಾನುಭವಿಗಳಿಗೆ ರೂ.390 ಕೋಟಿಗಳ ಸಹಾಯಧನವನ್ನು ಆನ್‍ಲೈನ್ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು.

ರೈತರ, ಕೃಷಿ ಕಾರ್ಮಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಗೂ 10ನೇ ತರಗತಿ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರೂ.2,500 ರಿಂದ ರೂ.11,000 ಗಳ ವರೆಗೆ ಒಟ್ಟು 11 ಲಕ್ಷ ರೈತ ಮಕ್ಕಳಿಗೆ ರೂ.488 ಕೋಟಿ ರೂ.ಗಳನ್ನು ವಿದ್ಯಾರ್ಥಿ ವೇತನದ ನೇರ ನಗದು ವರ್ಗಾವಣೆ ಮಾಡಲಾಗಿದೆ ಮತ್ತು ಈ ಯೋಜನೆಗಾಗಿ ಒಟ್ಟು 500 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈಗಾಗಲೇ 14 ಲಕ್ಷ ರೈತರಿಗೆ 1,900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ನೀಡಲಾಗಿದೆ. ರಾಜ್ಯಸರ್ಕಾರವು ಈ ಹಿಂದಿನ ಸರ್ಕಾರಗಳ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರಸ್ತುತ ನಮ್ಮ ಸರ್ಕಾರ ನೀಡುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ವಲಯದ ಅಭಿವೃದ್ಧಿ ಮತ್ತು ಕೃಷಿಕರ ನೆರವಿಗಾಗಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಬಡರೈತರ, ಕೃಷಿ ಕೂಲಿ ಕಾರ್ಮಿಕರ ಮತ್ತು ಅವರ ಮಕ್ಕಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ವಾಹನವನ್ನು ಮುಖ್ಯಮಂತ್ರಿಗಳು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು. ಮುಖ್ಯಮಂತ್ರಿಗಳು ಡಿಸೈಲ್ ಸಹಾಯಧನ ನೀಡುವ ರೈತಶಕ್ತಿ ಯೋಜನೆ, ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ, ಪ್ರಸಕ್ತ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯವೇತನ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು. ಮತ್ತು ಮುಖ್ಯಮಂತ್ರಿ ನೈಸರ್ಗಿಕ ಕೃಷಿ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ವರ್ಗಾವಣೆ ಮಾಡಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸ್ಥಾಪಿಸಿದ ಡಾ. ಎಸ್.ವ್ಹಿ. ಪಾಟೀಲ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠವನ್ನು ಲೋಕಾರ್ಪಣೆ ಮಾಡಿದರು. ಮತ್ತು ಕೃಷಿ ವಿಶ್ವವಿದ್ಯಾಲಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನೈಸರ್ಗಿಕ ಕೃಷಿ ಯೋಜನೆಯಡಿ ಆಯ್ಕೆಯಾದ ರೈತರಿಗೆ ಸಹಾಯಧನ ಚೆಕ್ ವಿತರಿಸಿದರು.

ಮುಖ್ಯಮಂತ್ರಿಗಳು ಕೃಷಿ ಇಲಾಖೆಯಿಂದ ನೀಡುವ ಕೃಷಿ ಪಂಡಿತ ಪ್ರಶಸ್ತಿ ಹಾಗೂ ಕೃಷಿ ಪ್ರಶಸ್ತಿಗಳನ್ನು ಆಯ್ಕೆಯಾದ ರೈತರಿಗೆ ವಿತರಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಇಲಾಖೆಯ ಯೋಜನೆಗಳನ್ನು ಮತ್ತು ಫಲಾನುಭವಿಗಳಿಗೆ ವಿತರಿಸಿದ ಸೌಲಭ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಮೃತ ದೇಸಾಯಿ ವಹಿಸಿದ್ದರು. ವೇದಿಕೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕ ಅರವಿಂದ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ರಾಜೇಶ ಕೋಟೆನ್ನವರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ, ಭಾರತ ಸರ್ಕಾರದ ಮಳೆಯಾಶ್ರೀತ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಅಶೋಕ ದಳವಾಯಿ, ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ: ಪಿ.ಎಲ್. ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ: ಎಂ.ವ್ಹಿ. ವೆಂಕಟೇಶ, ಕೃಷಿ ಆಯುಕ್ತ ಶರತ್ ಬಿ., ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಿ.ವೈ. ಶ್ರೀನಿವಾಸ, ಕೃಷಿ ನಿರ್ದೇಶಕ ಡಾ; ಜೆ.ಟಿ. ಪುತ್ರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಸ್ವಾಗತಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *