ಡಿವಿಜಿ ಸುದ್ದಿ, ದಾವಣಗೆರೆ: ರಾಷ್ಟ್ರ ಹಾಗೂ ರಾಜ್ಯ ಮಟ್ಟದ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ಮತ್ತು ಬ್ಲೂಂಬರ್ಗ್ ಇನಿಷಿಯೇಟಿವ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವೆಬಿನಾರ್ ಜೂಮ್ ಸಭೆ ನಡೆಸಲಾಯಿತು.
ಸಭೆಯಲ್ಲಿ ರಾಜ್ಯದ ಮಹಾನಗರ ಪಾಲಿಕೆ ಇರುವಂತಹ ನಗರಗಳಲ್ಲಿ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಉದ್ಯಮ ಪರವಾನಿಗೆ ನೀಡುವ ಕುರಿತು ತೀರ್ಮಾನಿಸಲಾಯಿತು.
ರಾಜ್ಯದ 10 ಮಹಾನಗರಪಾಲಿಕೆ ನಗರಗಳಾದ ದಾವಣಗೆರೆ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ ನಗರಗಳಲ್ಲಿ ಪ್ರತ್ಯೇಕ ಪರವಾನಿಗೆ ತೀರ್ಮಾನಿಸಲಾಯಿತು. ಮಹಾನಗರ ಪಾಲಿಕೆ ಕಾಯ್ದೆ-1976 ಅಡಿಯಲ್ಲಿ ಪ್ರತ್ಯೇಕ ವ್ಯಾಪಾರ ಪರವಾನಿಗೆ ನೀಡುವ ಮೂಲಕ ಕೋಟ್ಪಾ-2003ರ ಕಾಯ್ದೆಯನ್ನು ಉನ್ನತ ಅನುಷ್ಠಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಕೋಟ್ಪಾ ಕಾಯ್ದೆಗೆ ಸಂಬಂಧಪಟ್ಟ ಅನೇಕ ಪ್ರಮುಖ ವಿಷಯಗಳ ಕುರಿತು ತಿಳಿದುಕೊಳ್ಳಲು ಸಭೆ ಸಹಕಾರಿಯಾಗಿದೆ. ಈ ಎಲ್ಲ ವಿಷಯಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಕೋಟ್ಪಾ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು ಎಂದರು.
ಕೊರೊನಾ ಸಮಯದಲ್ಲಿಯೂ ಜಿಲ್ಲೆಯಲ್ಲಿ ಸಹ ರೂ. 4,84,670 ದಂಡ ವಸೂಲಿ ಮಾಡಲಾಗಿದ್ದು, 2615 ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 6ಬಿ ಶೈಕ್ಷಣಿಕ ಸಂಸ್ಥೆಗಳ ಆವರಣದ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದರು.
ಮಹಾನಗರಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಮಾತನಾಡಿ, ತಂಬಾಕು ಉತ್ಪನ್ನ ಲಭ್ಯತೆ ಕಡಿಮೆಯಾಗುವವರೆಗೂ ತಂಬಾಕು ನಿಯಂತ್ರಣ ಅಸಾಧ್ಯವಾಗಿದೆ. ಕೊರೊನಾ ಸಂದರ್ಭ ಇದಾಗಿದ್ದು, ವಾಹನ ಸವಾರರು ಗುಟ್ಕಾ ಎಲ್ಲೆಂದರಲ್ಲಿ ಉಗಿಯುತ್ತಾರೆ. ಈ ಹಿನ್ನೆಲೆಯಲ್ಲಿ ಚಿವಿಂಗ್ ಹಾಗೂ ಸ್ಮೋಕಿಂಗ್ ಜೋನ್ ನಿರ್ಮಿಸಬೇಕು ಸಲಹೆ ನೀಡಿದರು.
ಸಭೆಯಲ್ಲಿ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ನಾಗರಾಜ್ ಐತಾಳ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್, ಬೆಂಗಳೂರಿನ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಡಾ.ಸುರೇಶ್ ಬಾರ್ಕಿ, ಜಿಲ್ಲಾ ಆರೋಗ್ಯ ಮೇಲ್ವಿಚಾರ ಎಂ.ವಿ.ಹೊರಕೇರಿ, ಹಿರಿಯ ಆರೋಗ್ಯ ಸಹಾಯಕರಾದ ಲೋಕೇಶ್ ಮತ್ತು ವೆಂಕಟಾಚಲ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಮತ್ತು ದೇವರಾಜ್ ಹಾಗೂ ಮಹಾನಗರಪಾಲಿಕೆಯ ಎಲ್ಲಾ ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು ಪಾಲ್ಗೊಂಡಿದ್ದರು.



