ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಚನ ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿಯಿದ್ದು, ಅವುಗಳಲ್ಲಿ ಜೀವನ ಮೌಲ್ಯಗಳು ಅಡಕವಾಗಿವೆ ಎಂದು ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದ ಬಸವಾದಿ ಶಿವಶರಣರು ರಚಿಸಿದ ವಚನಗಳು ಇಂದಿಗೂ ಸತ್ಯವನ್ನೇ ಸಾರುವ ಜ್ಞಾನ ನದೀವಿಗೆಗಳಾಗಿವೆ. ಆಧುನಿಕ ವಚನಕಾರರಾದ ಮಹದೇವ ಬಣಕಾರ್ ಮತ್ತುಪೂಜ್ಯ ಪುಟ್ಟರಾಜ ಗವಾಯಿಗಳವರ ವಚನಗಳನ್ನು ಅರ್ಥೈಸಿ ಅತ್ಯಂತ ಮನೋಜ್ಞವಾಗಿ ವಿದ್ಯಾರ್ಥಿಗಳಿಗೆ ಅರ್ಥೈಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಿಗಿ ಮಾತನಾಡಿ, ವಚನಗಳು ಅನುಭವದ ಹಾಗೂ ಅನುಭಾವದಿಂದ 12 ನೇ ಶತಮಾನದಲ್ಲಿ ರಚಿತವಾದವುಗಳಾಗಿವೆ. ವಚನ ಸಾಹಿತ್ಯವು ಜೀವನಾಮೃತ ಅಂಶಗಳನ್ನು ಒಳಗೊಂಡಿವೆ ಎಂದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಪ್ರೊ. ಪರಶುರಾಮ್ ಬೊಂಗಾಳೆ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಅವರು ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ರಸರಂಜನೆ ನೀಡಿದರು.
ಅಧ್ಯಕ್ಷತೆಯನ್ನು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ವಹಿಸಿದ್ದರು. ತಾಲ್ಲೂಕು ಕಸಾಪ ಕಾರ್ಯದರ್ಶಿ ಬಿ.ಎಂ. ಮುರಿಗೆಯ್ಯ ಕುರ್ಕಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮ ಪಿ. ಬೊಂಗಾಳೆ ಅವರು ಉಪಸ್ಥಿತರಿದ್ದರು. ದೇವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಹ ಶಿಕ್ಷಕಿ ಮಮತಾ ಸ್ವಾಗತಿಸಿದರು. ಸಹ ಶಿಕ್ಷಕಿ ಮಾನಸ ಅವರು ವಂದಿಸಿದರು. ಸಹ ಶಿಕ್ಷಕಿ ಕಾವ್ಯ ಎಂ.ಎಸ್. ನಿರೂಪಿಸಿದರು.