ಮೈಸೂರು: ಜೆಡಿಎಸ್ ಬಾಗಿಲು ತೆರೆದಿದ್ದು, ಹೋಗುವವರು ಹೋಗಬಹುದು, ಬರುವವರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳಬರು ಹೋದರೆ ಹೊಸಬರು ಬರುತ್ತಾರೆ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರ ಎಂದು ಹೇಳಿದ್ದಾರೆ.
ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ.ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ. ಅವರಿಗೆ ಲಾಭ ಆಗುತ್ತದೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ತಿರುಗೇಟು ನೀಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೇಗೌಡರು ಯಾರನ್ನು ಬೆಳೆಸಿದ್ದರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.



