ಡಿವಿಜಿಸುದ್ದಿ.ಕಾಂ
ವರದಿ : ಬಸವರಾಜ ಸಿರಿಗೆರೆ
ಬ್ರೇಕಿಂಗ್
ಬೆಳಗಾವಿ ನೆರೆ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ
ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಣೆ
ಗೋಕಾಕ್ ತಾಲ್ಲೂಕಿನ ನೆರೆಸಂತ್ರಸ್ತರ ನೆರವಿಗೆ ತರಳಬಾಳು ಮಠ
ಪರಿಹಾರ ವಿತರಣಾ ಸಭೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ
ನೆರೆ ಸಂತ್ರಸ್ತ ಒಂದು ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ
ತರಳಬಾಳು ಮಠದ 250 ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುವ ಭರವಸೆ
ಭಕ್ತರು ನೀಡಿದ್ದ ಪರಿಹಾರ ಸಾಮಾಗ್ರಿಗಳನ್ನು ಖುದ್ದಾಗಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ವಿತರಣೆ
ಗೋಕಾಕ್: ಪ್ರವಾಹದಿಂದ ಮನೆ-ಮಠ, ಆಸ್ತಿ-ಪಾಸ್ತಿ ಹಾಳಾಗಿವೆ. ಇದರಿಂದ ನಿಮ್ಮ ಮಕ್ಕಳ ಭವಿಷ್ಯ ಹಾಳಾಗಬಾರದು. ರಾಜ್ಯದ ವಿವಿಧ ಭಾಗದಲ್ಲಿರುವ ತರಳಬಾಳು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಿರಿಗೆರೆಯ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು.
ನೆರೆ ಸಂತ್ರಸ್ತ ಒಂದು ಸಾವಿರ ಮಕ್ಕಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿರುವ 250 ಶಾಲಾ–ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡುತ್ತೇವೆ ಎಂದರು.
ಗೋಕಾಕ್ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಷ್ಟಗಳನ್ನು ಮೀರಿ ಬರುವ ಸುಖವೇ ನಿಜವಾದ ಸುಖ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ಶತಮಾನದಲ್ಲಿ ಕಂಡರಿಯದ ಪ್ರವಾಹಕ್ಕೆ ನೀವು ತಲ್ಲಣಗೊಂಡಿದ್ದೀರಿ. ಜನರಿಂದ ನೆರವಿನ ಹಸ್ತ ಸಿಕ್ಕಿದೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು’ ಎಂದು ತಿಳಿಸಿದರು.
‘ಗದಗ ಜಿಲ್ಲೆಯ ಹೊಳೇ ಆಲೂರು ಸುತ್ತಮುತ್ತಲ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ನಂತರ ಪರಿಹಾರ ಸಾಮಗ್ರಿಗಳು ವಿತರಣೆಯಾಗದ, ಜಿಲ್ಲಾ ಕೇಂದ್ರದಿಂದ ದೂರವಿರುವ ಢವಳೇಶ್ವರ ಗ್ರಾಮವನ್ನು ಗುರುತಿಸಿ ಇಲ್ಲಿಗೆ ಭೇಟಿ ನೀಡಿದ್ದೇವೆ’ ಎಂದರು.
ಸಂತ್ರಸ್ತರಿಗೆ ಸಿರಿಗೆರೆ ಮಠದಿಂದ ಅಡುಗೆ ಮನೆಯ ಪರಿಕರಗಳು, 25 ಕೆಜಿ ಅಕ್ಕಿ, ಬಟ್ಟೆಗಳನ್ನು ವಿತರಿಸಲಾಯಿತು. ವಿತರಣ ಕಾರ್ಯಕ್ಕೆ ಸಿರಿಗೆರೆ, ಅಳಗವಾಡಿ, ಓಬವ್ವನಾಗ್ತಿಹಳ್ಳಿ, ಹಳವುದರ, ಚಿಕ್ಕೇನಹಳ್ಳಿ, ಬೆನ್ನೂರು ಗ್ರಾಮಗಳ 200 ಜನ ಸ್ವಯಂಸೇವಕರು, ಎನ್‍ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ದಾವಣಗೆರೆ ಜಿಲ್ಲೆ 22 ಕೆರೆ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಮಂಜುನಾಥ ಗೌಡ, ಉದ್ಯಮಿ ರಾಜುಪಾಟೀಲ್, ಶಶಿಪಾಟೀಲ್, ವಸಂತ್‍ಕುಮಾರ್, ಸುಭಾಷ್ ಚಂದ್ರಭೋಸ್ ಇದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205