Connect with us

Dvgsuddi Kannada | online news portal | Kannada news online

ಇಳೆಯ ತರಳರಿಗೆ ಬಾಳು ಕಲಿಸಿ… ಬಿದ್ದ ಸಮಾಜ ಎತ್ತಿ ಹಿಡಿದು.. ಭಕ್ತರ ಬಾಳಿನ ಆರದ ಬೆಳಕು: ಶ್ರೀ‌ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

ಅಂಕಣ

ಇಳೆಯ ತರಳರಿಗೆ ಬಾಳು ಕಲಿಸಿ… ಬಿದ್ದ ಸಮಾಜ ಎತ್ತಿ ಹಿಡಿದು.. ಭಕ್ತರ ಬಾಳಿನ ಆರದ ಬೆಳಕು: ಶ್ರೀ‌ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

ರಳಬಾಳು ಪೀಠದ 20 ನೆಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕೋಟಿ ಕೋಟಿ ನಮನಗಳು..

ನಮ್ಮ ಭಾರತ ಪವಿತ್ರನಾಡು. ತತ್ವಾದರ್ಶಗಳ ನೆಲೆವೀಡು. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಋಷಿಗಳು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು, ದಾಸರು, ಸಾಧು ಸಂತರು, ಸತ್ಪುರುಷರು ಮತ್ತು ಮಠಾಧಿಪತಿಗಳು ಸಮಾಜವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ದಿದ್ದಾರೆ. ಹಾಗೆಯೇ  “ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಗುರುಸ್ಥಾನದಲ್ಲಿ ನಿಂತು ಜನರಲ್ಲಿ ಸದ್ಗುಣಗಳ ಬೀಜ ಬಿತ್ತಿ, ಸದಾ ಜೀವನಾದರ್ಶ ಮೌಲ್ಯ, ಜ್ಞಾನ ಪಸರಿಸಿ, ಸಮಾಜ ಕಟ್ಟುವಲ್ಲಿ ಇವರ ಸೇವೆ ಅನನ್ಯ”.

ಕರ್ನಾಟಕ ಮಾತ್ರವಲ್ಲದೆ, ಪ್ರಪಂಚವೇ ಬೆರಗಾಗುವ ಅದ್ಭುತ ಶಕ್ತಿ ಜಗಜ್ಯೋತಿ ಬಸವಣ್ಣನವರ ತತ್ವಾಮೃತ ಸವಿದು, ಬಸವ ತತ್ವಗಳನ್ನು ಮೈಗೂಡಿಸಿಕೊಂಡು ಅಮರರಾದವರಲ್ಲಿ ಯುಗದ ಗುರು ಸಿರಿಗೆರೆಯ ಶ್ರೀರತ್ನ ತರಳಬಾಳು ಬೃಹನ್ಮಠದ 20 ನೆ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಿಜಕ್ಕೂ ಎಲ್ಲಾ ಮಠ ಮಾನ್ಯಗಳಿಗೆ ಮಾದರಿ ಶ್ರೀಗಳು..

ಮುತ್ತುಗದೂರಿನ ಮುತ್ತಿನ ಮಣಿ

“ಧರ್ಮದ ಉದ್ಧಾರಕ್ಕೆ ಸಜ್ಜನರ ರಕ್ಷಣೆಗೆ ದುಷ್ಟರ ನಿಗ್ರಹಕ್ಕೆ ಮತ್ತು ಧರ್ಮ ಪರಿಪಾಲನೆಗೆ ಯುಗ ಯುಗಗಳಲ್ಲೂ ಅವತಾರವೆತ್ತುತ್ತೇನೆ” ಎಂದು ನುಡಿದ ಶ್ರೀ ಕೃಷ್ಣ ಪರಮಾತ್ಮನ ವಾಣಿಯಂತೆ ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರಿನ ಮುತ್ತಿನ ಮಣಿಯಂತೆ ಸಿರಿಗೆರೆಯ ಶ್ರೀ‌ ತರಳಬಾಳು ಜಗದ್ಗುರು ಬೃಹನ್ಮಠದ ಗುರು ಪರಂಪರೆಯಲ್ಲಿ 20ನೆ ಜಗದ್ಗುರುಗಳಾಗಿ 78 ವರ್ಷ ಕಾಲ ಅತ್ಯಮೂಲ್ಯ ಜೀವನವನ್ನು ಸಾಗಿಸಿದರು ಶ್ರೀ ಗುರುವರ್ಯರು. “ಸಹನೆಯ ಸಾಕಾರಮೂರ್ತಿಯಾಗಿ, ಸಮರ್ಥ ಗುರುವೆನಿಸಿ, ಚಾಣಾಕ್ಷ ಮಹಾಸ್ವಾಮಿಗಳೆನಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜನ ಸಾಮಾನ್ಯರ ಒಳಗಣ್ಣು ತೆರೆಸಿದ ಮಹಾ ಗುರುಗಳಾಗಿ ತರಳಬಾಳು ಹುಣ್ಣಿಮೆ ಹಾಗೂ ಶರಣ ಸಮ್ಮೇಳನಗಳ ಮುಖೇನ ಜನಸಾಮಾನ್ಯರಲ್ಲಿ ಏಕ್ಯತೆಯ ಬೀಜ ಬಿತ್ತಿದ ಗುರು ಕಾರುಣ್ಯರು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾರಿದ, ಸಮಾನತೆಯ ಹರಿಕಾರರಾಗಿ, ಸಮಾಜದಲ್ಲಿ ಧಾರ್ಮಿಕ ಭಾವನೆ ತುಂಬಿ, ಜನರ ಮನಸ್ಸಿನಲ್ಲಿ ಸ್ಥಾನ ಪಡೆದ ಹೃದಯ ಸಿಂಹಾಸನಾಧೀಶ್ವರ ಸಿರಿಗೆರೆಯ ಹಿರಿಯ ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು”.

ಮಹಾ ಮಾನವತಾವಾದಿ
ಅತ್ಯಲ್ಪ ಅವಧಿಯಲ್ಲಿ ಅದ್ಭುತ ಕ್ರಾಂತಿ ಮಾಡಿದ ನಿರ್ಮಲಾಂತಃಕರಣದ ಅಸೀಮ ಸಾಹಸಿ, 1914 ರ ಏಪ್ರಿಲ್ 28ರಂದು ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರು ಗ್ರಾಮದ ಮಹದೇವಯ್ಯ ಬಸಮ್ಮ ದಂಪತಿಗಳಿಗೆ ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪೂರ್ವಾಶ್ರಮದಲ್ಲಿ ರೇವಣಸಿದ್ದಯ್ಯ ಎಂಬ ಹೆಸರಿನಲ್ಲಿ ಮುತ್ತುಗದೂರು, ಬೀರೂರ, ಬನಾರಸ್‌ನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಪಡೆದು ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಂಡು, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 19ನೆಯ ಜಗದ್ಗುರುಗಳಾಗಿದ್ದ ಶ್ರೀ ಗುರುಶಾಂತ ದೇಶಿಕೇಂದ್ರ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಅವರ ಆದೇಶದಂತೆ ಶಿಕ್ಷಣವನ್ನು ಮೊಟಕುಗೊಳಿಸಿ 1933 ರ ಆಗಸ್ಟ್ 2 ರಂದು ಯಲಹಂಕ ಮಠದ ಚರ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ದಣಿವರಿಯದ ದಾರ್ಶನಿಕರಾಗಿ ಜನತೆಯಲ್ಲಿ ದುಡಿಮೆಯ ಬೆಲೆಯನ್ನು ಅರ್ಥೈಸಿದ ಅಪ್ರತಿಮ ಮಹಾನ್ ಸನ್ಯಾಸಿ, ಮೇರು ಚೈತನ್ಯ.. ಕೇವಲ ವ್ಯಕ್ತಿಯೆನಿಸದೇ ಶಕ್ತಿಯಾಗಿ ಬಾಳಿದವರು, ಸಮಾಜದ ಬೆಳಕಾಗಿ ಮಹಾ ಮಾನವತಾವಾದಿಯಾಗಿದ್ದರು.

ಸಮರ್ಥಗುರುವಾಗಿ, ಸ್ವಾಮಿಗಳ ಸ್ವಾಮಿಗಳಾಗಿ, ಭಕ್ತ ವತ್ಸಲರೆನಿಸಿ, 1940ರ ಮೇ10 ರಂದು ಬಸವ ಜಯಂತಿಯೆಂದು ಶ್ರೀ ತರಳಬಾಳು ಬೃಹನ್ಮಠದ ಅಧಿಪತಿಗಳಾಗಿ ಪಟ್ಟಾಭಿಷಕ್ತರಾದರು. ಶ್ರೀ ಮಠದ ಅಭಿವೃದ್ದಿಗೆ ಹಗಲಿರುಳೆನ್ನದೆ ಶ್ರಮಿಸಿ, ಮಠದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಎದೆಗುಂದದೇ ಧೈರ್ಯದಿಂದ ಎದುರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಸಾಧಿಸಿ, ಇಡೀ ನಾಡಿಗೆ ನಾಡೇ ಮೆಚ್ಚುವಂತೆ ಸಾಧನೆ ಮಾಡಿ ತೋರಿಸಿದ್ದಾರೆ.

ಪ್ರಾತಃ ಸ್ಮರಣೀಯರು

“ಶಿಕ್ಷಣ ಪ್ರಸಾರ, ಉಚಿತ ಊಟ ವಸತಿ, ಸಹ ಪಂಕ್ತಿ ಭೋಜನ, ಕೆರೆ ಕಟ್ಟೆಗಳ ದುರಸ್ತಿ, ಶಿಕ್ಷಣ ಸಂಸ್ಥೆಗಳ ಆರಂಭ, ವಸತಿ ನಿಲಯಗಳ ನಿರ್ಮಾಣ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಹೆಣ್ಣು ಮಕ್ಕಳ ಜ್ಞಾನಾರ್ಜನೆಗೆ ಪೋತ್ಸಾಹ, ಕಾಯಕ ನಿಷ್ಠೆಗೆ ನಾಂದಿಹಾಡಿದರು. ವಚನಗೋಷ್ಟಿ , ಶರಣರ ಜೀವನದ ನಾಟಕಗಳ ಮೂಲಕ ವಚನ ಸುಧೆಯನ್ನು ನಾಡಿನಾದ್ಯಂತ ಪಸರಿಸಿ, ಸರಳ ವಿವಾಹ, ಅಂತರ್ಜಾತಿ ವಿವಾಹದ ಮೂಲಕ ಸಾಮಾಜಿಕ ಪ್ರಜ್ಞೆ ಬೆಳಸಿ ಮನುಕುಲದ ನಿತ್ಯ ಸಂಜೀವಿನಿಯಾದರು, ಪ್ರಾತಃ ಸ್ಮರಣೀಯರು”..

ಭಕ್ತರ ಒಡನಾಟ ಮಹಾಸುದಿನವೆಂದು ಭಾವಿಸಿ ಸಮಾಜಕ್ಕಾಗಿ ಹುಟ್ಟಿ, ಸಮಾಜಕ್ಕಾಗಿ ದುಡಿದು ಸಮಾಜಕ್ಕಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡ ಈ ದಿವ್ಯ ಜ್ಯೋತಿ‌ ಸೆಪ್ಟೆಂಬರ್ 24, 1992 ರಂದು ಭೌತಿಕವಾಗಿ ಸಮಾಜವನ್ನು ಅಗಲಿದರು. ಆದರೆ, ಈಗಲೂ ಕೋಟ್ಯಂತರ ಭಕ್ತರ ಮನಸ್ಸಿನಲ್ಲಿ ಆರದ ಬೆಳಕಾಗಿದ್ದಾರೆ.

ಅಮರ ಜ್ಯೋತಿಯಾಗಿ, ನಂದಾ ದೀಪವಾಗಿ, ದಿಟ್ಟ ಹೆಜ್ಜೆಯ ಅದ್ಭುತ ಶಕ್ತಿಗಳ ಸಂಕೇತವಾಗಿ, ಶೈಕ್ಷಣಿಕ ಸಿರಿಯಾದ ಈ ಮಹಾಗುರುವಿಗೆ ಕೋಟಿ ಕೋಟಿ ಪ್ರಣಾಮಗಳು…

-ಡಾ. ಅನಿತಾ ಹೆಚ್. ದೊಡ್ಡಗೌಡರ್
ಸಹಾಯಕ ಪ್ರಾಧ್ಯಾಪಕರು
ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾ ವಿದ್ಯಾಲಯ
ದಾವಣಗೆರೆ
9902198655

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

To Top