ಡಿವಿಜಿಸುದ್ದಿ.ಕಾಂ. ದಾವಣಗೆರೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರನ್ನು ಟೀಕಿಸುವ ಭರದಲ್ಲಿ ದಡ್ಡ-ವಡ್ಡ ಎಂಬ ಪದ ಬಳಕೆ ಮಾಡಿದ್ದು, ವಡ್ಡ ಎಂಬ ಪದ ಬಳಕೆಯಿಂದ ಭೋವಿ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಕೆ.ಎಸ್.ಈಶ್ವರಪ್ಪ ಭೋವಿ ಸಮಾಜವನ್ನು ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಭೋವಿ ಸಮಾಜದ ಮುಖಂಡ ಮತ್ತು ಕಾಂಗ್ರೆಸ್ ನಾಯಕ ಡಿ. ಬಸವರಾಜು ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಅವರು, ಭೋವಿ ಸಮಾಜದ ಕುಲ ಕಸುಬು ಕಲ್ಲೊಡೆಯುವುದಾಗಿದ್ದು ವಡ್ಡರು ಅಂತಲೂ ಕರೆಯುತ್ತಾರೆ. ನಾವು ಬಂಡೆ ಹೊಡೆದು ಬದುಕುತ್ತೇವೆ. ತಲೆ ಹೊಡೆದು ಅಲ್ಲ. ನಮ್ಮ ಕುಲ ಕಸುಬನ್ನು ಪ್ರಾಮಾಣಿಕತೆಯಿಂದ ಮಾಡುತ್ತೇವೆ. ಆದ್ರೆ, ನಮ್ಮ ಸಮಾಜವನ್ನು ಸಚಿವ ಈಶ್ವರಪ್ಪ ದಡ್ಡ-ವಡ್ಡ ಎಂದು ಟೀಕಿಸುವ ಮೂಲಕ ಅವಮಾನಿಸಿದ್ದಾರೆ. ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರ ನಿರ್ಮಾಣಕ್ಕೆ ತನ್ನದೇ ಕೊಡುಗೆ ನೀಡಿರುವ ಭೋವಿ ಸಮಾಜ ಕೆರೆ ಕಟ್ಟೆ, ದೇವಸ್ಥಾನಗಳ ನಿರ್ಮಾಣ, ಶಿಲ್ಪ ಕಲೆಯಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಇಂತಹ ಸಮಾಜವನ್ನು ವಡ್ಡ-ದಡ್ಡ ಎನ್ನುವ ಮೂಲಕ ಸಮಾಜವನ್ನು ಅವಹೇಳನ ಮಾಡಿದ್ದಾರೆ. ಈ ಹೇಳಿಕೆ ಜಾತಿ ನಿಂಧನೆ ಕೇಸ್ ಅಡಿಯಲ್ಲಿ ಬರಲಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.