ಡಿವಿಜಿ ಸುದ್ದಿ, ಹುಬ್ಬಳ್ಳಿ: ಹಿಂದೂ ಧರ್ಮದ ಸಂಪ್ರದಾಯದಂತೆ ತಮ್ಮ ಮಗುವಿಗೆ ಮುಸ್ಲಿಂ ಸಮುದಾಯದ ಕುಟುಂಬವೊಂದು ಮಸೀದಿಯಲ್ಲಿ ಮಗುವಿನ ಜವಳ (ಮುಡಿ) ತೆಗೆಸುವ ಮೂಲಕ ವಿಶೇಷತೆ ಮೆರೆದಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕನರ್ತಿ ಗ್ರಾಮದ ಲಾಲಸಾಬ್ ನದಾಫ್ ಹಾಗೂ ಅಮೀನಾ ನದಾಫ್ ದಂಪತಿಗಳು ತಮ್ಮ ಮಗಳಿಗೆ ಜವಳ ತೆಗೆಯುವ ಸಂಪ್ರದಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆರು ತಿಂಗಳ ಮಗು ಆರೀಫ್‌ಗೆ ಜವಳ ತೆಗೆಸುವ ಕಾರ್ಯಕ್ರಮವನ್ನು ಮಸೀದಿಯಲ್ಲಿ ಮಾಡಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆಯೊಂದಿಗೆ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದೆ.
ಹಿಂದೂ ಧರ್ಮದಲ್ಲಿ ಜವಳ ಅಥವಾ ಮುಡಿ ತೆಗೆಯುವುದು ಸರ್ವೇ ಸಾಮಾನ್ಯ. ಮಗುವಿನ ಕೂದಲನ್ನು ಮೊದಲ ಬಾರಿಗೆ ಕತ್ತರಿಸುವಾಗ ಜವಳ ಶಾಸ್ತ್ರ ಎನ್ನಲಾಗುತ್ತಿದೆ. ಮಗುವಿನ ತಂದೆ- ತಾಯಿ ಮತ್ತು ಸೋದರ ಮಾವನ ಉಪಸ್ಥಿತಿಯಲ್ಲಿ ಜವಳ ತೆಗೆಯಲಾಗುತ್ತದೆ. ಧಾರ್ಮಿಕ ಕೇಂದ್ರಗಳಲ್ಲಿ ಜವಳ ತೆಗೆಯುವುದು ಹಿಂದೂಗಳ ಸಂಪ್ರದಾಯಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಜವಳ ತೆಗೆಯುವ ಸಂಪ್ರದಾಯವಿಲ್ಲ.



