ಡಿವಿಜಿಸುದ್ದಿ.ಕಾಂ, ಸಿರಿಗೆರೆ: ರೈತರ ಜೀವನಾಡಿಯಾಗಿರುವ ಜಾನುವಾರಿಗೆ ಉತ್ತಮ ಆಹಾರ, ಆರೋಗ್ಯ ತಪಾಸಣೆ ನಡೆಸುವ ಮೂಲಕ ಕಾಲು ಬಾಯಿ ಜ್ವರದಂತಹ ರೋಗದಿಂದ ರಕ್ಷಿಸಿ ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.
ಸಿರಿಗೆರೆಯ ಪಶುಚಿಕಿತ್ಸಾಲಯದ ಆವರಣದಲ್ಲಿ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಪಶು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಹಿರಿಯ ಗುರುಗಳಾದ ಲಿಂ. ಗುರುಶಾಂತರಾಜ ದೇಶೀಕೇಂದ್ರ ಸ್ವಾಮೀಜಿಯವರ ಕಾಲದಲ್ಲಿ ನಿರ್ಮಿಸಲಾದ ಪಶು ಚಿಕಿತ್ಸಾಲಯವು ಕೆಲವು ಸೌಲಭ್ಯಗಳಿಂದ ವಂಚಿತವಾಗಿರುವುದು ಕಂಡು ಬಂದಿದೆ. ಆಸ್ಪತ್ರೆ ಸುತ್ತಲಿನ ಸುಸಜ್ಜಿತ ಕಾಂಪೌಂಡ್, ಧ್ವಜದ ಕಂಬ, ನೀರು, ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿ’ ಎಂದು ಸ್ಥಳದಲ್ಲಿಯೇ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು.
ಜಾನುವಾರಿಗೆ ನೀಡುವ ರಸಮೇವು, ಸೂಬಾಬುಲ್, ಮೆಕ್ಕೇಜೋಳ, ಹತ್ತಿಕಾಳು ಹಿಂಡಿ, ಶೇಂಗಾ ಹಿಂಡಿ, ಗೋಧಿ ತೌಡನ್ನು ಸ್ವಾಮೀಜಿ ವೀಕ್ಷಿಸಿ ಮಾಹಿತಿ ಪಡೆದರು.ದಾಣಗೆರೆಯ ಏರಿಯಾ ಸೇಲ್ಸ್ ಮ್ಯಾನೇಜರ್ ಜಯರಾಮ್ ಜಾನುವಾರಿಗೆ ಬೇಕಾಗುವ ಔಷಧಗಳನ್ನು ರೈತರಿಗೆ ಉಚಿತವಾಗಿ ನೀಡಿದರು.
ಈ ಸಂಧರ್ಭದಲ್ಲಿ ದಾವಣಗೆರೆ ಸಹಾಯಕ ನಿರ್ದೇಶಕ ಡಾ.ಶಂಕ್ರಪ್ಪ, ಚಿತ್ರದುರ್ಗ ಸಹಾಯಕ ನಿರ್ದೇಶಕ ಡಾ.ಪ್ರಸನ್ನಕುಮಾರ್, ವೈದ್ಯಾಧಿಕಾರಿಗಳಾದ ಮುರುಗೇಶ್, ನವೀನ್‍ಗೌಡ, ಸಾದತ್‍ಪಾಷಾ, ತಿಪ್ಪೇಸ್ವಾಮಿ, ಸತೀಶ್‍ಕುಮಾರ್, ಸ್ವಾಮಿ, ಶಶಿಧರ್, ಎನ್.ಜಿ.ಸಿದ್ದೇಶ್ವರಯ್ಯ ಹಾಗೂ ಜಮ್ಮೇನಹಳ್ಳಿ, ಸಿರಿಗೆರೆ, ಚಿಕ್ಕೇನಹಳ್ಳಿ, ಓಬವ್ವನಾಗ್ತಿಹಳ್ಳಿ ಗ್ರಾಮಸ್ಥರು ಹಾಗೂ ಪಶುಚಿಕಿತ್ಸಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.