ಮೆಕ್ಕೆಜೋಳ ಬೆಳೆಗೆ ವೈಜ್ಞಾನಿಕ  ನಿರ್ವಹಣೆ ಅತಿ ಮುಖ್ಯ: ರೇವಣಸಿದ್ಧನಗೌಡ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಖುಷ್ಕಿ ಪ್ರದೇಶದ ಶೇ. 90 ರಷ್ಟು ವಿಸ್ತೀರ್ಣವನ್ನು ಮೆಕ್ಕೆಜೋಳ ಒಂದೇ ಬೆಳೆ ಆವರಿಸಿಕೊಂಡಿದೆ. ಆದ್ದರಿಂದ ಈ ಬೆಳೆಯ ವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ.ರೇವಣಸಿದ್ದನಗೌಡ ಹೇಳಿದರು.

ಕೃಷಿ ಇಲಾಖೆ ಹಾಗೂ ಗಂಗಾ ಕಾವೇರಿ ಸೀಡ್ಸ್ ಕಂಪನಿ  ಸಹಯೋಗದಲ್ಲಿ ಮಾಸ್ಕ್ ದಿನಾಚರಣೆಯ ಅಂಗವಾಗಿ ನರಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಹಾಗೂ ಮೆಕ್ಕೆ ಜೋಳ ಬೆಳೆಯಲ್ಲಿ ಲದ್ದಿಹುಳು ಹತೋಟಿ ತರಬೇತಿ ಕಾರ್ಯಕ್ರಮದಲ್ಲಿ ಮೆಕ್ಕೆಜೋಳ ಬೆಳೆಯ ನಿರ್ವಹಣೆ ಬಗ್ಗೆ ಕುರಿತು ಮಾತನಾಡಿದರು.

ಮೆಕ್ಕೆಜೋಳ ವಾಡಿಕೆಯಲ್ಲಿ ಲೇಜಿಮನ್ (ಆಲಸೀಗರ) ಬೆಳೆಯಾಗಿ ಇಂದಿನ ಕೂಲಿಕಾರ್ಮಿಕರ ಸಮಸ್ಯೆಯ ಸ್ಥಿತಿಯಲ್ಲಿ ಅನಿವಾರ್ಯವಾಗಿ ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಬೆಳೆಗೆ ಲದ್ದಿ ಹುಳು ಎಂಬ ಕೀಟ ಬಾಧೆ ತುಂಬಾ ಹಾನಿಯುಂಟು ಮಾಡುತ್ತಿದೆ. ಈಗಾಗಲೇ ತಾಲ್ಲೂಕಿನ ಕಸಬಾ ಹೋಬಳಿ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಈ ಕೀಟಕ್ಕೆ ಕೀಟನಾಶಕ ಸಿಂಪರಣೆ ಅತ್ಯವಶ್ಯಕವಾಗಿದೆ. ಜೊತೆಗೆ ಸಿಂಪರಣೆಯ ಪದ್ಧತಿಯೂ ಮುಖ್ಯವಾಗಿದೆ ಎಂದರು.

ಈ ಕೀಟ ಬಾಧೆಗೆ ಇಮಾಮೆಕ್ಟಿನ್ ಬೆಂಜೋಯೇಟ್ ಶೇ. 5 ಎಸ್.ಪಿ., ಅಥವಾ 0.4 ಗ್ರಾಂ ಅಥವಾ ಸ್ಪೆನೋಸಾಡ್ 45 ಎಸ್.ಪಿ. 0.3 ಮಿ.ಲಿ. ಅಥವಾ ಥೈಯೋಡಿಕಾರ್ಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಕಡ್ಡಾಯವಾಗಿ ಕೀಟನಾಶಕವನ್ನು ಸುಳಿಗೆ ಬೀಳುವಂತೆ ಸಿಂಪರಣೆ ಮಾಡಬೇಕು. ಜೊತೆಗೆ ರೈತರು ಯೂರಿಯಾ ಗೊಬ್ಬರವನ್ನು ಅವಶ್ಯಕತೆಗೆ ಅನುಗುಣವಾಗಿ ಉಪಯೋಗಿಸಬೇಕು. ಶುಷ್ಕ ವಾತಾವರಣ ಮುಂದುವರೆದಲ್ಲಿ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಬೆಳೆಗಳಿಗೆ ಸಿಂಪರಣೆ ಮಾಡಿ, ಪೋಷಕಾಂಶ ನೀಡುವುದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಪ್ರಗತಿಪರ ರೈತರಾದ ಶಿವಣ್ಣ ಮಾತನಾಡಿ, ಮೆಕ್ಕೆಜೋಳ ಬೆಳೆಯನ್ನು ರೈತರು ವೈಜ್ಞಾನಿಕವಾಗಿ ಬೆಳೆಯುವುದರ ಜೊತೆಗೆ ಬೆಳೆ ಪರಿವರ್ತನೆ ಮಾಡಿಕೊಂಡರೆ ಹಾಗೂ ಬೆಳೆದ ಬೆಳೆಗೆ ಸರ್ಕಾರ ಉತ್ತಮ ಬೆಂಬಲ ಬೆಲೆಯನ್ನು ಹಂಗಾಮು ಪೂರ್ವದಲ್ಲಿಯೇ ನಿಗಧಿಪಡಿಸಿದರೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಂಗಾ ಕಾವೇರಿ ಸಂಸ್ಥೆಯ ಬೀಜ ವಿತರಕ ದಿನೇಶ್ ಮಾತನಾಡಿ, ಕೋವಿಡ್-19 ಮಹಾಮಾರಿ ನಡುವೆಯೂ ಕೃಷಿ ಕಾರ್ಯಗಳನ್ನು ನಿಗಧಿತ ಸಮಯಕ್ಕೆ ಕೈಗೊಳ್ಳುವುದು ಜೀವನಕ್ಕೆ ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಇದರೆ ಹಿನ್ನೆಲೆಯಲ್ಲಿ ಕಂಪನಿಯು ಸಾಮಾಜಿಕ ಜವಾಬ್ದಾರಿಯ ಅರಿವಿನಡಿಯಲ್ಲಿ ಗ್ರಾಮದಲ್ಲಿನ ಎಲ್ಲಾ ರೈತರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಕವಚ ವಿತರಣೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಜವಾಬ್ದಾರಿ ಅರಿತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಗಿರೀಶ್, ಗಂಗಾ ಕಾವೇರಿ ಸಂಸ್ಥೆಯ ಪ್ರತಿನಿಧಿ ಶ್ರೀನಿವಾಸ್ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *