ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹತಾಶೆರಾಗಿ ಮೇಯರ್ ಅಜಯ್ ಕುಮಾರ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಆನಂದರಾವ್ ಶಿಂಧೆ ಆರೋಪಿಸಿದರು.
ಮೇಯರ್ ಮತ್ತು ಜಿಲ್ಲಾಡಳಿತ ಅನ್ಯೋನ್ಯವಾಗಿದೆ. ಇದನ್ನು ಸಹಿಸಿಕೊಳ್ಳದ ದಿನೇಶ್ ಕೆ. ಶೆಟ್ಟಿ ವೈಮನಸ್ಸು ತರಲು ಮುಂದಾಗಿದ್ದಾರೆ. ಸೋಲಿನಿಂದ ಕಂಗೆಟ್ಟಿರುವ ಶೆಟ್ಟಿ, ಮೇಯರ್ ಮತ್ತು ಜಿಲ್ಲಾಡಳಿತದ ನಡುವೆ ವೈಮನಸ್ಸು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಯರ್ ಅಜಯಕುಮಾರ್ 17 ನೇ ವಾರ್ಡ್ ನಲ್ಲಿ ವೈಯಕ್ತಿಕವಾಗಿ ಬಡವರಿಗೆ ಸಾಕಷ್ಟು ಆಹಾರ ಕಿಟ್ ಗಳನ್ನು ಹಂಚಿಕೆ ಮಾಡಿದ್ದಾರೆ. ಆದರೆ, ವಾರ್ಡ್ ನ ಜನರು ಹಣ ಪಡೆದು ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ವಾರ್ಡ್ ಜನರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್ ಮಾತನಾಡಿ, ಲಾಕ್ ಡೌನ್ ನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಹೊರೆಯಾಗದಂತೆ ಎಲ್ಲಾ ಇಎಂಐ, ಸಾಲದ ಕಂತು, ಎಲ್ ಐಸಿ ಕಂತುಗಳನ್ನು ಕಟ್ಟಲು ಮೂರು ತಿಂಗಳು ಕಲಾವಕಾಶ ನೀಡಿದೆ. ಅದೇ ರೀತಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಟ್ರೇಡ್ ಲೈಸೆನ್ಸ್ ಮಾಡಿಸಿಕೊಳ್ಳು 90 ದಿನಗಳ ಕಾಲ ಅವಕಾಶ ಕೊಟ್ಟಿದೆ. ಇದನ್ನು ಪ್ರತಿ ಪಕ್ಷಗಳು ವಿರೋಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಬಿಜೆಪಿ ಉತ್ತರ ಅಧ್ಯಕ್ಷ ಸಂಗನಗೌಡ್ರು, ನರೇಂದ್ರ ಕುಮಾರ್ ಉಪಸ್ಥಿತರಿದ್ದರು.



