ಡಿವಿಜಿ ಸುದ್ದಿ, ದಾವಣಗೆರೆ: ರೈತ ಬೆಳೆದ ಹಳದಿ ಕಲ್ಲಂಗಡಿ ಹಣ್ಣಿನ ನೇರ ಮಾರುಕಟ್ಟೆಗೆ ಜಿಲ್ಲಾ ಕೃಷಿ ಪರಿಕರಗಳ ವಿತರಕ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಚಾಲನೆ ನೀಡಿದರು.
ದಾವಣಗೆರೆ ತಾಲ್ಲೂಕಿನ ಕೆಂಚಮ್ಮನಹಳ್ಳಿ ರೈತ ಮಲ್ಲಿಕಾರ್ಜುನ ಎಂಬುವವರು 3 ಎಕರೆಯಲ್ಲಿ ಹಳದಿ ಬಣ್ಣದ ಸ್ವಾದಭರಿತ, ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಳದಿ ಕಲ್ಲಂಗಡಿ ಬೆಳೆದಿದ್ದಾರೆ. ಇದು ಹೊರದೇಶಗಳಿಗೆ ರಫ್ತಾಗುತ್ತಿತ್ತು ಮತ್ತು ರಂಜಾನ್ ಸಮಯದಲ್ಲಿ ಮುಂಬೈ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುತ್ತಿತ್ತು. ಕೊರೊನ ವೈರಸ್ ನಿಂದಾಗಿ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ವೈಜ್ಞಾನಿಕ ಸಲಹೆ ನೀಡುತ್ತಿರುವ ಇಕೋ ಅಗ್ರಿಪ್ರೆನೂರ್ಸ್ ಪ್ರೈ.ಲಿ. ದಾವಣಗೆರೆ ತಂಡದ ಸದಸ್ಯರಾದ ದಿನೇಶ್, ಸುರೇಶ್ ಮತ್ತು ನಾಗನ ಗೌಡ ಇವರು ರೈತರು ನೇರವಾಗಿ ಮಾರುಕಟ್ಟೆ ಮಾಡುವಂತೆ ಯೋಜನೆಯನ್ನು ರೂಪಿಸಿದರು.

ದಾವಣಗೆರೆಯ ಅನೇಕ ಗ್ರಾಹಕರಿಗೆ ವ್ಯಾಟ್ಸಾಪ್ ಮುಖಂತರ ನೇರ ಮಾರಾಟ ಮಾಡುವ ಮಾಹಿತಿಯನ್ನು ನೀಡಲಾಗಿದೆ. ಅನೇಕರಿಗೆ ಮಾಹಿತಿ ಮುಟ್ಟುವಲ್ಲಿ ಇದು ಸಹಕಾರಿಯಾಯಿತು. ನೇರ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸುಮಾರು 2 ಟನ್ ಹಣ್ಣನ್ನು ನೇರವಾಗಿ ಮಾರಾಟ ಮಾಡಲಾಗಿದೆ. ರೈತರಾದ ಮಲ್ಲಿಕಾರ್ಜುನ ಇವರು ನೇರ ಮಾರ್ಕೆಟಿಂಗ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ರೈತರಿಗೆ ಹಣ್ಣು ಮಾರಾಟ ಮಾಡುವ ವಿಶ್ವಾಸ ಹೆಚ್ಚಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ರೇವಣ ಸಿದ್ದನಗೌಡರು ಮತ್ತು ಖ್ಯಾತ ವೈದ್ಯ ಡಾ. ಮಂಜುನಾಥ್ ಗೌಡ ಉಪಸ್ಥಿತರಿದ್ದರು.



