ಡಿವಿಜಿ ಸುದ್ದಿ, ದಾವಣಗೆರೆ: ಗ್ರೀನ್ ಝೋನ್ ಗೆ ಬಂದಿದ್ದ ದಾವಣಗೆರೆಯಲ್ಲಿ 24 ಗಂಟೆ ಅವಧಿಯಲ್ಲಿ ಎರಡು ಹೊಸದಾಗಿ ಕೊರೊನಾ ಪ್ರಕರಣ ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಈ ಎರಡು ಪ್ರಕರಣಗಳು ಹೇಗೆ ಬಂದಿವೆ ಎಂಬುದರ ಮೂಲ ಇನ್ನು ಕೂಡ ಪತ್ತೆಯಾಗಿಲ್ಲ.
ಭಾಷಾ ನಗರದ ನಿವಾಸಿ ನರ್ಸ್ ಹಾಗೂ ಜಾಲಿನಗರ ನಿವಾಸಿ ವೃದ್ಧರೊಬ್ಬರಿಗೆ 24 ಗಂಟೆಯ ಅಂತರದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿವೆ. ಈ ಇಬ್ಬರನ್ನು ಇದೀಗ ಚಿಕಿತ್ಸೆಗೆ ಒಳಪಡಿಸಲಾಗಿದೆ. ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಂಕು ಮೂಲವನ್ನು ಸಿಡಿಆರ್ ವರದಿಯ ಮೂಲಕ ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯ ತಂಡ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಡೆಯುತ್ತಿದೆ.

ಭಾಷಾನಗರ ನಿವಾಸಿ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು 26 ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು 49 ಜನರನ್ನು ಪತ್ತೆ ಹಚ್ಚಲಾಗಿದೆ. ಈ 75 ವ್ಯಕ್ತಿಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಜಾಲಿನಗರದ ನಿವಾಸಿ ವೃದ್ಧನಿಗೆ ಸಂಬಂಧಿಸಿದಂತೆ ಪಾಥಮಿಕ ಸಂಪರ್ಕ ಹೊಂದಿರುವವರು 10 ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರು 12 ಜನರನ್ನು ಪತ್ತೆ ಹಚ್ಚಿ ಇವರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಹಾಗೂ ಇವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಲಾಗಿದೆ. ಈ ರೋಗಿಗೆ ಸಂಬಂಧಿಸಿದ ಕಾಂಟಾಕ್ಟ್ ಟ್ರೇಸಿಂಗ್ ಇನ್ನೂ ಪ್ರಗತಿಯಲ್ಲಿದೆ.
ಭಾಷಾನಗರ ಮತ್ತು ಜಾಲಿನಗರಗಳಲ್ಲಿ ಕಂಟೈನ್‍ಮೆಂಟ್ ಝೋನ್ ಸ್ಥಾಪಿಸಿ ಡಿಸ್‍ಇನ್‍ಫೆಕ್ಷನ್ ಕೆಲಸ ಮಾಡಲಾಗಿದೆ. ಹಾಗೂ ಸಕ್ರಿಯ ಸರ್ವೇಕ್ಷಣಾ ಕ್ರಮಗಳನ್ನು ಸಹ ಕೈಗೊಂಡು ಸರ್ವೇ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.



