ಡಿವಿಜಿಸುದ್ದಿ.ಕಾಂ, ಕಲ್ಬುರ್ಗಿ: ಕಲ್ಯಾಣ ಕರ್ನಾಟಕಕ್ಕೆ ಅಡ್ಡಿ ಆಗುವ ಎಲ್ಲ ಕಾನೂನು ತೊಡಕುಗಳನ್ನು ಸರಿಪಡಿಸಿ, ಸಂವಿಧಾನದ 371 ಜೆ ಅಡಿಯಲ್ಲಿ ಹೊಸ ಆಡಳಿತ ಶಾಖೆ ತೆರೆದು ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನದ ಸಂದರ್ಭದಲ್ಲಿ ಹೊಸದಾಗಿ `ಕಲ್ಯಾಣ ಕರ್ನಾಟಕ’ ಎಂಬ ಹೆಸರು ನಾಮಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಎಂಬ ನೂತನ ನಾಮಕರಣದಿಂದ ಈ ಭಾಗಕ್ಕೆ 70 ವರ್ಷದಿಂದ ಇದ್ದ ಸಂಕೋಲೆಯಿಂದ ಬಿಡುಗಡೆ ಸಿಕ್ಕಂತಾಗಿದೆ. ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ.
ಸಂವಿಧಾನದ 371 ಜೆ ಕಾಲಂ ಅಡಿಯಲ್ಲಿ ಈ ಭಾಗದ ಸಮಗ್ರ ಅಭಿಬೃದ್ಧಿಗೆ ನಾವು ಸಿದ್ಧವಿದ್ದೇವೆ. “ಹೊಸ ಆಡಳಿತ ಶಾಖೆ ತೆರೆದು ಹೆಚ್ಚಿನ ಅನುದಾನ ನೀಡಲಾಗುವುದು. ೩೭೧ಜೆ ಕಾಲಂಗೆ ತಿದ್ದುಪಡಿ ತಂದು ಬೆಂಗಳೂರಿನಲ್ಲಿರು ಪ್ರಧಾನ ಕಚೇರಿ ಜೊತೆಗೆ ಕಲ್ಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿ ತೆರೆಯಲಾಗುವುದು” ಎಂದರು.
“ಶರಣ ಪಂಪರೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಇತ್ತು. ಇದನ್ನು ಮರು ಸೃಷ್ಟಿ ಮಾಡಲು ಎಲ್ಲರು ಶ್ರಮಿಸಬೇಕಿದೆ. ಕರ್ನಾಟಕದ ಬಗ್ಗೆ ರಾಜ್ಯ ಮತ್ತು ಕೇಂದ್ರದ ಇತಿಹಾಸ ಪಠ್ಯದಲ್ಲಿ ಸೇರಿಸಲಾಗುವುದು. ಕಲ್ಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಧ್ಯಾಯನ ಪೀಠ ತೆರೆಯಲಾಗುವುದು . ಬಸವಣ್ಣ ನವರ ಅನುಭವ ಮಂಟಪದ ವೈಚಾರಿಕ ನೆಲೆಯಲ್ಲಿ ಮೂಡಿದ ಕಲ್ಯಾಣ ಕ್ರಾಂತಿ ನೆಲೆ ಬೀಡಾಗಿರುವ ಈ ಪ್ರದೇಶವನ್ನು ಸರ್ವರಿಗೂ ಪಾಲು, ಸರ್ವರಿಗೂ ಬಾಳು ತತ್ವದ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು” ಎಂದರು.
ಸಂಸದ ಡಾ.ಉಮೇಶ ಜಾಧವ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಳ ತೆಲ್ಕೂರ, ಎಂ.ವೈ.ಪಾಟೀಲ, ಸುಭಾಷ ಗುತ್ತೆದಾರ, ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೆದಾರ, ಬಾಬುರಾವ ಚಿಂಚನಸೂರು, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಶ್ಚನಾಥ ಪಾಟೀಲ ಹೆಬ್ಬಾಳ ಉಪಸ್ಥಿತರಿದ್ದರು.