‘ಉಳುವ ಯೋಗಿಗಳ’ ನೇಗಿಲ ಹೆಸರಿನಲ್ಲಿರುವ ‘ಹಲಾಸನ’(Halasana)ದ ಅಭ್ಯಾಸದಿಂದ ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ದೇಹ ಪಡೆಯುತ್ತದೆ.
ಶಿಷ್ಯ: ಗುರುಗಳೆ ನಿತ್ಯ ಮನೆಯಲ್ಲಿಯೇ ಇರುವುದರಿಂದ ಹೊಸತನ ಎನಿಸುತ್ತಿಲ್ಲ. ಯೋಗ (Yoga) ಅಭ್ಯಾಸದ ಬಗ್ಗೆ ವಿವರಿಸಿ.
ಗುರು: ಹೌದು. ಹಾಗೆಯೇ ಒಂದು ಸುತ್ತು ಕಾಡಿನತ್ತ ಹೋಗೋಣ. ಗಿಡ, ಮರ, ಬಳ್ಳಿ, ಶುದ್ಧಗಾಳಿ, ಬೆಳಕು, ನದಿ ನೀರಿನ ಜುಳು ಜುಳು ನಿನಾದ ಆಲಿಸುತ್ತಾ ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಕಲಿಯಬಹುದಲ್ಲವೇ? ನಿನ್ನದು ಒಳ್ಳೆ ಆಲೋಚನೆ. ಆದರೆ ಮನೆಯಿಂದ ಹೊರ ಹೋಗದ ಸ್ಥಿತಿಯಲ್ಲಿದ್ದೇವೆ.
ಶಿಷ್ಯ: ಮನೆಯಲ್ಲಿದ್ದು ಏನು ಮಾಡುವುದು? ವೈರಸ್ ವಿರುದ್ಧ ಹೋರಾಡುವ ಶಕ್ತಿ ಗಳಿಸುವುದು ಹೇಗೆ? ಈಗಿನ ದಿನಗಳಲ್ಲಿ ಜಮೀನಿನಲ್ಲಿ ರೈತರು ಏನು ಮಾಡುತ್ತಿದ್ದಾರೆ?
ಗುರು: ಮುಂಗಾರು ಪೂರ್ವ ಮಳೆ ಇನ್ನಷ್ಟೇ ಆರಂಭವಾಗಬೇಕಿದೆ. ಜೋಡೆತ್ತಿನ ನೊಗಕ್ಕೆ ನೇಗಿಲು ಹೂಡಿ ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗೆ ಭೂಮಿ ಸಿದ್ಧ ಮಾಡುತ್ತಿದ್ದಾರೆ. ಇವರು ಬರೀ ರೈತರಲ್ಲ ‘ಉಳುವ ಯೋಗಿಗಳು’. ಶ್ರಮ ಜೀವಿಗಳ ಫಲವಾಗಿ ನಾವು ಅನ್ನ, ಮುದ್ದೆ ಊಟ ಮಾಡಲು ಸಾಧ್ಯವಾಗುತ್ತಿದೆ.
ಶಿಷ್ಯ: ನೇಗಿಲಿಗೆ ಇನ್ನೊಂದು ಹೆಸರಿದೆಯೇ, ಇದರ ಶಕ್ತಿ ಎಂತಹದ್ದು?
ಗುರು: ‘ಹಲ’ ಎಂದರೆ ನೇಗಿಲು ಎಂದರ್ಥ. ಇದನ್ನು ಹೋಲುವ ‘ಹಲಾಸನ’(Halasana)ವೂ ರೂಢಿಯಲ್ಲಿದೆ.
ಅಭ್ಯಾಸ ಕ್ರಮ:
ನೆಲಕ್ಕೆ ಬೆನ್ನೊರಗಿಸಿ ಅಂಗಾತ ಮಲಗಿ. ಕೈಗಳು ತೊಡೆಯ ಪಕ್ಕ ಇರಲಿ. ಕಾಲುಗಳನ್ನು ಜೋಡಿಸಿ ನಿಧಾನವಾಗಿ ಮೇಲೆತ್ತಿ. ನೆಲದಿಂದ 90 ಡಿಗ್ರಿ ಕೋನದಲ್ಲಿ ನಿಲ್ಲಿಸಿ. ಬಳಿಕ, ಉಸಿರನ್ನು ಹೊರ ಹಾಕುತ್ತಾ ಸೊಂಟಭಾಗವನ್ನು ಮೇಲೆತ್ತುತ್ತಾ ಕೈಗಳಿಂದ ಬೆನ್ನಿನ ಭಾಗವನ್ನು ಒಳಕ್ಕೆ ಒತ್ತಿ. ಕಾಲುಗಳು ತಲೆಯ ಮೇಲ್ಗಡೆ ನೆಲಕ್ಕೆ ತಾಗಿಸಿ ಎಷ್ಟು ಸಾಧ್ಯವೋ ಅಷ್ಟು ಹಿಂದೆಕ್ಕೆ ಚಾಚಿ. ಸೊಂಟಕ್ಕೆ ಆಧಾರವಾಗಿರಿಸಿದ್ದ ಕೈಗಳನ್ನು ಬಿಡಿಸಿ. ಎರಡೂ ಕೈ ಬೆರಳುಗಳನ್ನು ಹೆಣೆದು ನೀಳವಾಗಿಸಿ ನೆಲದ ಮೇಲಿರಿಸಿ. ಸಾಮಾನ್ಯ ಉಸಿರಾಟ ನಡೆಸಿ. 1ರಿಂದ 5 ನಿಮಿಷ ಅಭ್ಯಾಸ ನಡೆಸಬಹುದು.

ಪ್ರಯೋಜನಗಳು:
*ಕುತ್ತಿಗೆಗೆ ಉತ್ತಮ ವ್ಯಾಯಮ ದೊರೆಯುವುದರಿಂದ ಗಂಟಲು ದೋಷ ನಿವಾರಣೆಯಾಗಿ, ವೈರಸ್ ನಂತಹ ಸೂಕ್ಷ್ಮ ಕ್ರಿಮಿಗಳ ವಿರುದ್ಧ ಹೋರಾಡುವ ಶಕ್ತಿ ಲಭಿಸುತ್ತದೆ.
*ಕಿಬ್ಬೊಟ್ಟೆಗೆ ತಾರುಣ್ಯ ತುಂಬುತ್ತದೆ. ಬೆನ್ನೆಲುಬಿನ ಹಿಗ್ಗುವಿಕೆಗೆ ನೆರವಾಗುವುದು. ಸರಿಯಾದ ರಕ್ತ ಪರಿಚಲನೆಯಾಗುತ್ತದೆ.
*ಕತ್ತು, ಭುಜ ನೋವು ನಿವಾರಣೆಯಾಗಿ, ತೊಳು, ಅಂಗೈ, ಕೈ ಬೆರಳು, ಅಂಗೈ ನೋವು ದೋಷ ದೂರ ಆಗುತ್ತವೆ.
*ಅನ್ನದಾತನಿಂದಾಗಿ ನಮ್ಮ ದೇಹದಲ್ಲಿ ರಕ್ತ ಹರಿಯುವಂತಾಗಿದೆ. ನೇಗಿಲ ಕುಳದೊಳು ಅಡಗಿರುವ ಶಕ್ತಿಯಿಂದ ರೈತ ದೇಶದ ಬೆನ್ನೆಲುಬು ಎನಿಸಿದ್ದಾನೆ. ಇದು ನೇಗಿಲ ಶಕ್ತಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com
