ಡಿವಿಜಿ ಸುದ್ದಿ,ದಾವಣಗೆರೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೋನ ವೈರಸ್ ಸಂಕಷ್ಟಕ್ಕೆ ವೈಜ್ಞಾನಿಕ ವಾಗಿ ಚಿಂತನೆ ನಡೆಸಲಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ತಿಳಿಸಿದ್ದಾರೆ.
ರಾಷ್ಟ್ರ ದ ವೈದ್ಯರು, ವಿಜ್ಞಾನಿಗಳು, ಸಂಶೋಧಕರುಗಳ ಸಲಹೆ, ಮಾರ್ಗ ದರ್ಶನ ಪಡೆದು ಕೊರೊನಾ ಸೋಂಕು ನಿರ್ಮೂಲನೆ ಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ಪರಿಹಾರ ಕಂಡುಕೊಳ್ಳಲಿ.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜನತಾ ಕರ್ಫ್ಯೂ ಹೇರಿದ್ದಾಗ ಚಪ್ಪಾಳೆ ಹೊಡೆಯಲು ದೇಶದ ಜನತೆಗೆ ತಿಳಿಸಿದಾಗ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಚಪ್ಪಾಳೆ ತಟ್ಟುವ ಬದಲು ವೈದ್ಯರಿಗೆ ಸೂಕ್ತ ಸೌಲಭ್ಯ, ಪರಿಕರಗಳ ವ್ಯವಸ್ಥೆ ಮಾಡಬೇಕು ಎಂದರು.
ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ಗಳ ಕಾಲ ಮನೆ ಲೈಟ್ ಆಫ್ ಮಾಡಿ, ಮನೆ ಬಾಗಿಲಿನಲ್ಲಿ ದೀಪ, ಮೊಂಬತ್ತಿ, ಟಾರ್ಚ್, ಅಥವಾ ಫ್ಲಾಶ್ ಲೈಟ್ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಮುಂದೆ ಲೈವ್ ನಲ್ಲಿ ಹೇಳಿದ್ದು ಹಾಸ್ಯಾಸ್ಪದ ಎಂದು ಡಿ. ಬಸವರಾಜ್ ಟೀಕಿಸಿದ್ದಾರೆ.
ಕೊರೊನಾ ವೈರಸ್ ತಡೆಯಲು ಜನ ಜಾಗ್ರತೆ ಮಾಡ ಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಮೂಡನಂಬಿಕೆ ಗಳನ್ನು ಜನರ ಮೇಲೆ ಹೇರಲು ಹೊರಟಿರುವುದು ದೇಶದ ದೌರ್ಭಾಗ್ಯ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೌಖ್ಯ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿರುವ ಡಾ. ಐಸಾಕ್ ಮಥಾಯ್ ಎಂಬ ವೈದ್ಯರು ನೀಡಿದ ಆಯುರ್ವೇದ, ಹೋಮಿಯೋಪತಿ, ಸಲಹೆಗಳ ಮೂಲಕ ಕೊರೊನಾ ಸೋಂಕು ಗೆದ್ದ ಬ್ರಿಟನ್ ರಾಜ ಚಾರ್ಲ್ಸ್ ರವರ ವಿಚಾರವನ್ನು ಮಾದರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನರ ಮುಂದೆ ಹೇಳಬೇಕಾಗಿತ್ತು.
ಕೊರೊನಾ ವೈರಸ್ ನಿಂದ ಕೋಟಿ – ಕೋಟಿ ಬಡ ಜನರು ಬೀದಿಗೆ ಬಿದ್ದಿದ್ದಾರೆ. ಊಟಕ್ಕೂ ಗತಿಯಿಲ್ಲದೇ ಸಾಯುತ್ತಿದ್ದಾರೆ. ಸಂಕಷ್ಟದಲ್ಲಿರುವ ನಿರಾಶ್ರಿತರ ಬಗ್ಗೆ ಸಹಾಯಕ್ಕೆ ಬನ್ನಿ, ಅವರಿಗೆ ಊಟ ಓದಗಿಸಿ ಎಂದು ಹೇಳುವ ಬದಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಎಂಬ ಹೇಳಿಕೆ ಗಳನ್ನು ನಿಲ್ಲಿಸಲಿ ತಮ್ಮ ಸ್ಥಾನಕ್ಕೆ ಸರಿಯಾಗಿ ಯೋಚಿಸಲಿ ಎಂದು ಹೇಳಿದ್ದಾರೆ.



