ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ಗುರುವಾರದಿಂದ ಏಪ್ರಿಲ್ 14 ರವರೆಗೂ ಉಚಿತವಾಗಿ ಹಾಲು ವಿತರಣೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಲಾಕ್‍ಡೌನ್‍ನಿಂದ ಬಡವರಿಗೆ, ಕೃಷಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ನಿನ್ನೆಯ ಸನ್ನಿವೇಶ ಬೇರೆ, ಇವತ್ತಿನ ಸನ್ನಿವೇಶ ಬೇರೆ. ಜನಕ್ಕೆ ಇವತ್ತಿಂದ ಇನ್ನಷ್ಟು ಸಡಿಲತೆ ಮಾಡಲಾಗುತ್ತಿದೆ. ಲಾಕ್‍ಡೌನ್‍ನಿಂದ ಸಾಮಾನ್ಯರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ನಾಳೆಯಿಂದ ಸ್ಲಂಗಳಲ್ಲಿರುವ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲೂ ಬಡವರಿಗೆ ಏಪ್ರಿಲ್ 14 ರವರೆಗೆ ಉಚಿತ ಹಾಲು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳನ್ನು ಯಾರು ಕೂಡ ತಡೆಯುತ್ತಿಲ್ಲ. ಸರಕು ಸಾಗಣೆ ವಾಹನಗಳನ್ನು ತಡೆಯದಂತೆ ಪೊಲೀಸರಿಗೂ ಸೂಚಿಸಿದ್ದೇವೆ. ಒಂದು ವೇಳೆ ವಾಹನಗಳನ್ನು ತಡೆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಇದೆ. ಅಗತ್ಯ ವಸ್ತುಗಳು, ತರಕಾರಿ, ಹಣ್ಣಿನ ಮಾರಾಟಕ್ಕೆ ಯಾವುದೇ ಭಂಗ ಇಲ್ಲ. ಸಭೆಯಲ್ಲಿ ರೈತರು ಮತ್ತು ಗ್ರಾಹಕರ ಹಿತ ಕಾಪಾಡಲು ಕೆಲ ತೀರ್ಮಾನಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ರಫ್ತಾಗುತ್ತಿರುವ ಹಣ್ಣು, ತರಕಾರಿಗಳ ವಾಹನಗಳಿಗೆ ತಡೆಯಬಾರದು. ಹಾಪ್‌ಕಾಮ್ಸ್‌ಗಳನ್ನು ಇಡೀ ದಿನ ತೆರೆದಿರಲು ಸೂಚನೆ ನೀಡಲಾಗಿದೆ. ತರಕಾರಿ, ಹಣ್ಣು ಜೊತೆ ಮೊಟ್ಟೆ ಮಾರಾಟಕ್ಕೆ ಹಾಪ್‌ಕಾಮ್ಸ್‌ನಲ್ಲಿ ಅವಕಾಶ ಮಾಡಲಾಗಿದೆ. ಟ್ರೈನ್‍ಗಳಲ್ಲಿ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಣೆಗೂ ಅವಕಾಶ ಕಲ್ಪಿಸಲಾಗಿದೆ. ಜನರು ಒಮ್ಮೆಲೆ ಹೆಚ್ಚು ಖರೀದಿಸುವ ಅಗತ್ಯ ಇಲ್ಲ ಎಂದು ಹೇಳಿದರು.
ತರಕಾರಿ, ಹಣ್ಣುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಂತಹರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಕೃಷಿ ಉತ್ಪನ್ನಗಳ ಸಾಗಾಣಿಕೆ ಅವಕಾಶ ಇದ್ದರೆ ಬೇಡಿಕೆ ಅಭಾವ ಕಡಿಮೆಯಾಗಲಿದೆ. ರೇಷ್ಮೆ ಮಾರುಕಟ್ಟೆ, ಅಕ್ಕಿ, ದಾಲ್ ಮಿಲ್‍ಗಳನ್ನು ತೆರೆಯಲು ಸೂಚಿಸಲಾಗಿದೆ.
ಇವತ್ತಿನಿಂದ ಮುಂಗಡ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ರೈತರ ಬೆಳೆಗಳಿಗೆ ಉತ್ತಮ ದರ ಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಜೊತೆ ವಿಧವಾ ವೇತನ, ವೃದ್ಧಾಪ್ಯ ವೇತನಗಳಿಗೆ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಪೆನ್ಷನ್‍ಗಳನ್ನು ತಕ್ಷಣ ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ಸಹಕಾರ ಇಲಾಖೆ ಸಚಿವ ಎಸ್.ಟಿ ಸೋಮಶೇಖರ್, ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಕಂದಾಯ ಸಚಿವ ಆರ್.ಅಶೋಕ್ ಮತ್ತು ಆಹಾರ ಸಚಿವ ಗೋಪಾಲಯ್ಯ ಭಾಗಿಯಾಗಿದ್ದರು.