ಡಿವಿಜಿ ಸುದ್ದಿ, ಬೆಂಗಗಳೂರು: ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ ಭೀತಿಗೆ ರಾಜ್ಯ ತತ್ತರಿಸಿ ಹೋಗಿದೆ. ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ರಾಜ್ಯಕ್ಕೆ 4 ನೇ ಸ್ಥಾನ ಲಭಿಸಿದ್ದು, ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕಿತ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕೇರಳ, ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶ ರಾಜ್ಯಗಳಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಮತ್ತು ಐಸಿಎಂ ಆರ್ ಮಾರ್ಗದರ್ಶನ ಪ್ರಕಾರ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ಜೊತೆ ಒಡನಾಟ ನಡೆಸಿದವರ ಮೇಲೆಯೂ ನಿಗಾ ವಹಿಸಲಾಗಿದೆ. ರಾಜ್ಯದಲ್ಲಿ 1 ಲಕ್ಷದ 17 ಸಾವಿರದ 366 ಜನರು ವಿದೇಶಿ ಪ್ರಯಾಣ ಮಾಡಿದವರು ಪತ್ತೆಯಾಗಿದ್ದಾರೆ. ಅವರಲ್ಲಿ 86 ಸಾವಿರ ಜನ ತಪಾಸಣೆ ನಡೆಸಲಾಗಿದೆ. ಇನ್ನುಳಿದವರನ್ನು ಪತ್ತೆ ಹಚ್ಚಲಾಗುತ್ತಿದೆ.
ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರವಾಗಿದ್ದರಿಂದ ನಗರದಲ್ಲಿ 20 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ಸಾವಿರಾರು ಜನ ವಿಮಾನಗಳ ಮೂಲಕ ಬಂದು ಹೋಗುತ್ತಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಐಸಿಎಂಆರ್ ಮತ್ತು ಕೇಂದ್ರ ಸರ್ಕಾರ ಕೊರೊನಾ ವೈರಸ್ 4 ಹಂತದಲ್ಲಿ ಹರಡುತ್ತದೆ ಎಂದು ತಿಳಿದ್ದಾರೆ. ಪ್ರೈಮರಿ ಹಂತ, ಕ್ಲಸ್ಟರ್ ಹಂತ, ಕಮ್ಯೂನಿಟಿ ಹಂತ ಹಾಗೂ ಕಂಟ್ರಿವೈಡ್ ಹಂತದಲ್ಲಿ ಹರಡುತ್ತದೆ ಎಂದು ತಿಳಿಸಿದ್ದಾರೆ. ಆದರೆ, ರಾಜ್ಯ 2 ನೇ ಹಂತದಲ್ಲಿದೆ . ಇದನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಾಗಿದೆ. ರಾಜ್ಯ ಸರ್ಕಾರದಿಂದ 104 ಸಹಾಯ ವಾಣಿಯನ್ನು ತೆರದಿದ್ದು, ಕೊರೊನಾ ವೈರಸ್ ಬಗ್ಗೆ ಏನೇ ಮಾಹಿತಿ ಬೇಕಿದ್ದರೂ ಸಹಾಯವಾಣಿಗೆ ಕರೆ ಮಾಡಬಹುದು. ದೇಶದಲ್ಲಿ 54 ಕೊರೊನಾ ವೈರಸ್ ಲ್ಯಾಬ್ ಗಳಿವೆ. ರಾಜ್ಯದಲ್ಲಿ 5 ಲ್ಯಾಬ್ ಗಳಿವೆ ಎಂದು ತಿಳಿಸಿದರು.



