ನಾಡೋಜ ಪಾಟೀಲ್ ಪುಟ್ಟಪ್ಪ ಲಿಂಗೈಕ್ಯ: ಕಳಚಿತು ತರಳಬಾಳು ಮಠದ ಹಿರಿಯ ಕೊಂಡಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

‘ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಈ ಹೊತ್ತಿನ ಪೂರ್ವದಿ ಲಿಂಗೈಕ್ಯರಾಗಿದ್ದಾರೆ.ವಯೋ ಸಹಜ ಖಾಯಿಲೆಯಿಂದ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ನಗರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಪಾಟೀಲ್ ಪುಟ್ಟಪ್ಪನವರು 101 ವಯಸ್ಸಿನ ಹಿರಿಯ ಸಾಹಿತಿಗಳಾಗಿದ್ದರು.

ಅನಾರೋಗ್ಯದಿಂದ ಪೀಡಿತರಾಗಿದ್ದ ಅವರನ್ನು ನಗರ ಕಿಮ್ಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆಯಷ್ಟೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾಟೀಲ್ ಪುಟ್ಟಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ಬಳಿಕ ಇಂದು ನಿಧನರಾಗಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದಂತ ನಷ್ಟವಾಗಿದೆ.

ಇತ್ತೀಚೆಗೆ ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ಪಾಪುರವರ ಆರೋಗ್ಯ ವಿಚಾರಿಸಿದ್ದರು.

ಪಾಪು ತರಳಬಾಳು ಬೃಹನ್ಮಠದ ಹಿರಿಯ ಕೊಂಡಿ

ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠಕ್ಕೂ ಪಾಟೀಲ್ ಪುಟ್ಟಪ್ಪನವರಿಗೂ ಕಳೆದ ಎಂಟು ದಶಕಗಳ ಅವಿನಾಭಾವ ಗುರು ಶಿಷ್ಯ ಸಂಬಂಧವಿದೆ. ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ನಿರ್ಮಲ ಹಾಗೂ ನೇರ ನಿಶ್ಕಲ್ಮಷ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ಪಾಟೀಲ್ ಪುಟ್ಟಪ್ಪನವರು ಅಂದಿನಿಂದಲೂ ಶ್ರೀ ಬೃಹನ್ಮಠದ ಶಿಷ್ಯ ಪ್ರಮುಖರಲ್ಲಿ ಓರ್ವರಾಗಿದ್ದಾರೆ. ಅವರ ಎಲ್ಲಾ ಹೋರಾಟ, ಚಳುವಳಿಗೆ ಶ್ರೀ ಬೃಹನ್ಮಠವು ಬೆಂಬಲ ಮತ್ತು ಮಾರ್ಗದರ್ಶನ ಮಾಡುತ್ತಾ ಬಂದಿದೆ. ವಿದ್ವತ್ಪೂರ್ಣ ಮಹಾನ್ ವೇದಿಕೆ ಎಂದೇ ಸುಪ್ರಸಿದ್ದಿಯಾದ ತರಳಬಾಳು ಹುಣ್ಣಿಮೆ ಮಹೋತ್ಸವ ಗಳಲ್ಲಿ ನಿರಂತರವಾಗಿ ಭಾಗವಹಿಸಿ ಅದರಲ್ಲಿರೂ ಕೊನೆಯ ದಿನವೇ ನನಗೆ ಉಪನ್ಯಾಸ ನೀಡುವಂತೆ ಮನವಿಯನ್ನು ಮಾಡುತ್ತಾ ರಾಜಕೀಯ ನೇತಾರರಿಗೆ ಕನ್ನಡದ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತಿದ್ದರು. 1988 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಸಹಕರಿಸಿದ್ದರು.

papu 2

ಲಿಂಗೈಕ್ಯ ಹಿರಿಯ ಶ್ರೀ ಜಗದ್ಗುರುಗಳ ಶ್ರದ್ಧಾಂಜಲಿಯಲ್ಲಿ ಭಕ್ತಿ ನುಡಿನಮನವು ಪಾಟೀಲ್ ಪುಟ್ಟಪ್ಪ ನವರಿಗೆ ಮೀಸಲಾಗಿದ್ದಿದ್ದು ಅವರಿಗೆ ಶಿಷ್ಯ ಭಕ್ತಿಯ ಗೌರವದ ದ್ಯೋತಕದಂತಿತ್ತು.

ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾತೃಸ್ವರೂಪ ಪ್ರೇಮವನ್ನು ಆರಾಧಿಸುತ್ತಾ ಅವರ ವಿದ್ವತ್ ಪ್ರಭೆಗೆ ಬೆರಗಾಗಿದ್ದ ಪಾಪುರವರು, ಶ್ರೀ ಜಗದ್ಗುರುಗಳವರ ಎಲ್ಲಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ , ರೈತಮುಖಿ ಯೋಜನೆಗಳ ಯಶಸ್ವಿಗೆ ಬಹು ಮೆಚ್ಚುಗೆ ವ್ಯಕಪಡಿಸುತ್ತಿದ್ದರು. ಪಾಟೀಲ್ ಪುಟ್ಟಪ್ಪನವರು ಈ ಭಾರಿ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ಆರೋಗ್ಯದ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ.

ಪಾಟೀಲ್ ಪುಟ್ಟಪ್ಪನವರಿಗೆ 2019 ರ ಜನವರಿ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದ ಸಾರ್ಥಕ ಸಮಯದಿ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿ ಶುಭ ಹಾರೈಸಿದ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಕುರಿತಾದ ತಮ್ಮ ಹೋರಾಟದ ಹಳೆಯ ನೆನಪುಗಳ ಸುರಳಿಯನ್ನು ಪಾಪು ಶ್ರೀ ಜಗದ್ಗುರುಳವರ ಮುಂದೆ ಬಿಚ್ಚಿಟ್ಟರು. ರಾಜಕೀಯ ಮುಖಂಡರಿಗೆ ನಾಡು ನುಡಿಯ ವಿಷಯಗಳು ಪ್ರಥಮ ಆದ್ಯತೆ ಆಗಬೇಕು.ಆದರೆ ಅವರಿಗೆ ಇವು ಕೊನೆಯ ಆದ್ಯತೆಗಳಾಗಿರುವುದು ವಿಷಾದಕರವೆಂದು ಪಾಪು ಅನಿಸಿಕೆ ವ್ಯಕ್ತಪಡಿಸಿದರು.

papu

ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಭಾಗವಹಿಸಿದ್ದರು. ಉದ್ಘಾಟನೆ ಮುಗಿಸಿ ಹೊರಡಲು ವೇದಿಕೆ ಇಳಿದು ಹೊರಡಲು ಮುಂದಾದರು. ಆಗ ನಾನು ಸಮ್ಮೇಳನಾಧ್ಯಕ್ಷರ ಭಾಷಣ ಇನ್ನೂ ಮುಗಿದಿಲ್ಲ. ನಾಡಿನ ಮುಖ್ಯಮಂತ್ರಿಯಾದ ನೀವು ಅದು ಹೇಗೆ ಸಮ್ಮೇಳನಾಧ್ಯಕ್ಷರ ಭಾಷಣ ಕೇಳದೆ ಹೋಗುತ್ತೀರಿ ಎಂದು ಜಬರಿಸಿದೆ. ಕುರ್ಚಿಯಿಂದ ಮೇಲೆದ್ದ ಮುಖ್ಯಮಂತ್ರಿಗಳು ಪುನಃ ಕುಳಿತರು ಎಂದು ಹಳೆಯ ನೆನಪನ್ನು ಅವರು ಬಿಚ್ಚಿದ್ದರು ಪಾಪು ಅವರ ಅದ್ಭುತ ನೆನಪಿನ ಶಕ್ತಿಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ತರಳಬಾಳು ಶ್ರೀಗಳವರು ನಾಡು ನುಡಿಗಳ ಬಗೆಗಿನ ಅವರ ಕಾಳಜಿಯನ್ನು ರಾಜಕೀಯ ನೇತಾರರು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ ಅವರು ಚಿರಕಾಲ ಆರೋಗ್ಯದಿಂದ ಇದ್ದು ಕನ್ನಡ ನಾಡು ನುಡಿಗಳಿಗೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಒಂದು ಲಕ್ಷ ರೂಗಳ ನಿಧಿಯನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಪಾಟೀಲ ಪುಟ್ಟಪ್ಪ ಜನಿಸಿದ್ದು ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ. ಓದಿದ್ದು ಕುರುಬಗೊಂಡ, ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ. ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ.ಇವರು ‘ಪ್ರಪಂಚ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದರು 1945ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು ಪುಟ್ಟಪ್ಪ.1949ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ. ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ. 1954ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ.1962‍ರಿಂದ 1974‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. 1942‍ರ ಅಗಸ್ಟ 9ರಂದು ಕಾಲೇಜಿನ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧಿ ಟೊಪ್ಪಿಗೆ ಹಾಕಿದ್ದರು. ಇಂತಹ ಹಿರಿಯ ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಕವಿ ಪಾಟೀಲ್ ಪುಟ್ಟಪ್ಪ ನಮ್ಮನ್ನು ಅಗಲಿದ್ದಾರೆ.

ವರದಿ: ಬಸವರಾಜ ಸಿರಿಗೆರೆ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *