ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗ ಸಮೀಪವಿರುವ ಚಿಕ್ಕಮೆಗಳಗೆರೆ ಗ್ರಾಮದಲ್ಲಿ ಸ್ಥಾಪಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶ ಬರುವವರೆಗೂ ಅಪೂರ್ಣಗೊಂಡ ಪುತ್ಥಳಿ ಯಥಾಸ್ಥಿಗೆ ಕಾಪಾಡುವಂತೆ ಉಪ ವಿಭಾಗಾಧಿಕಾರಿ ಪ್ರಸನ್ನ ಕುಮಾರ್ ಸೂಚನೆ ನೀಡಿದರು.
ಗ್ರಾಮದಲ್ಲಿ ಗುರುವಾರ ಸಾರ್ವಜನಿಕ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಪುತ್ಥಳಿ ನಿರ್ಮಾಣಕ್ಕೆ ಗ್ರಾಮದ ಪ್ರಮುಖರಿಂದ ಪರ-ವಿರೋಧ ಅಭಿಪ್ರಾಯ ಸಂಗ್ರಹಿಸಿ, ಪುತ್ಥಳಿಯನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಾಣ ಮಾಡಲು ಪರವಾನಿಗಾಗಿ ಸೂಕ್ತ ದಾಖಲೆಯೊಂದಿಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.

ಸರ್ಕಾರದ ಆದೇಶದ ಬಳಿಕ ಪುತ್ಥಳಿ ಪೂರ್ಣ ನಿರ್ಮಾಣದ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಪುತ್ಥಳಿ ಯಥಾ ಪ್ರಕಾರ ಇರವಂತೆ ನಿಗಾ ವಹಿಸಲಾಗುವುದು. ಗ್ರಾಮದಲ್ಲಿ ಅಶಾಂತಿ ನಿರ್ಮಾಣಗೊಳಿಸಲು ಕಟ್ಟೆಚ್ಚರಕ್ಕಾಗಿ ಅಗತ್ಯ ಸಿ.ಸಿ.ಟಿವಿ ಅಳವಡಿಸಿ ನಿಗಾ ವಹಿಸುವಂತೆ ಗ್ರಾಪಂ ಪಿಡಿಒಗೆ ಸೂಚಿಸಲಾಗುವುದು. ಗ್ರಾಮದಲ್ಲಿ ಕೋಮುಗಲಭೆ ಕಾರಣವಾಗುವಂತಹ ಕೃತ್ಯಗಳಲ್ಲಿ ಭಾಗವಹಿಸಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಡಿವೈಎಸ್ಪಿ ಡಿ. ಮಲ್ಲೇಶ್ ಮಾತನಾಡಿ, ದೇಶದ ಹಿರಿಮೆಯನ್ನು ದೇಶ ವಿದೇಶಗಳಲ್ಲಿ ಸಾರಿದ ಕೀರ್ತಿ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಅಂಬೇಡ್ಕರ್, ರಾಣಿ ಚೆನ್ನಮ್ಮರಂತಹ ಮಹನೀಯರಿಗಿದೆ. ಮಹಾನ್ ವ್ಯಕ್ತಿಗಳು ಯಾವುದೇ ಜಾತಿ, ಸಮುದಾಯಕ್ಕಾಗಿ ಸೀಮಿತವಾಗಿಲ್ಲ. ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳೆವಣಿಗೆಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದು ವಿಷಾದನೀಯ ಎಂದರು.
ಗ್ರಾಮದಲ್ಲಿ ಕೋಮು ಸೌಹಾರ್ದತೆಯಿಂದಿರಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪುತ್ಥಳಿಗಳ ನಿರ್ಮಾಣಕ್ಕೆ ಮುಂದಾದಲ್ಲಿ ವಿವಿಧ ಸಮುದಾಯಗಳು ನೆಲೆಸಿರುವ ಗ್ರಾಮದಲ್ಲಿ ಸರಕಾರದ ವತಿಯಿಂದ ಯಾವುದೆ ಪುತ್ಥಳಿಗಳನ್ನು ಗ್ರಾಮದಲ್ಲಿ ನಿರ್ಮಿಸಬಾರದೆಂದು ಗ್ರಾಮದ ಕೆಲವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಈಶ್ವರ ಖಂಡೇ, ಇನ್ಸ್ಪೆಕ್ಟರ್ ಕೆ. ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಉಪ ತಹಶೀಲ್ದಾರ್ ಫಾತಿಮಾ ಬಿ, ಸಬ್ ಇನ್ಸ್ಪೆಕ್ಟರ್ ಎ. ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕರಾದ ಶ್ರೀಧರ್, ಮುಖಂಡರಾದ ಗೌಡ್ರ ರೇವನಸಿದ್ದಪ್ಪ, ಬಣಕಾರ ಬಸವರಾಜ, ದುರ್ಗಪ್ಪ, ರೇವಣಸಿದ್ದಪ್ಪ, ಚೌಡಪ್ಪ, ದಂಡಿಯಪ್ಪ, ಗೋಣೆಪ್ಪ, ದಾವಣಗೆರೆ ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ . ದಲಿತ ಹಿರಿಯ ಮಖಂಡ ಜಿಎನ್ ಸತ್ಯಪ್ಪ ಗೌರಿಪುರ , ಬೇತೂರು ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು .



