ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಗ್ರಾಮದ ಸುಮಾರು 300 ಎಕರೆ ವಿಸ್ತೀರ್ಣ ಹೊಂದಿರುವ, ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿ ಪಡಿಸಲ್ಪಟ್ಟಿರುವ ಕೆಂಚಮಾರನಹಳ್ಳಿ ಕೆರೆಯು ಹೂಳು ತುಂಬಿ ನಿರ್ಲಕ್ಷ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪುನರುಜ್ಜೀವನಗೊಳಿಸಲು ಮುಂದಾಗಿದೆ.
ಮಾಯಕೊಂಡ ಹೊರವಲಯದ ಗುಡ್ಡದ ಸಮೀಪವಿರುವ ಪಾಳೆಗಾರರ ಕಾಲದ ಕೆಂಚಮಾರನಹಳ್ಳಿ ಕೆರೆ ನಾಪತ್ತೆಯಾಗಿ ಇತ್ತೀಚಿಗೆ ಬೆಳಕಿಗೆ ಬಂದಿದೆ. ಶಾಸಕ ಕೆ. ಎಸ್ ಬಸವಂತಪ್ಪ ಇಚ್ಛಾಶಕ್ತಿ, ರೈತರ ನಿರಂತರ ಪ್ರಯತ್ನದ ಫಲವಾಗಿ ಕೆರೆ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಇಂದು (ನ.17) ಮಾಯಕೊಂಡ ಶಾಸಕ ಬಸವಂತಪ್ಪ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಸಿ ಇ ಓ ಗಿತ್ತೆ ಮಾಧವ ವಿಠ್ಠಲರಾವ್, ಅರಣ್ಯ ಇಲಾಖೆ ಡಿ ಎಫ್ ಓ ಹರ್ಷವರ್ಧನ್, ಆರ್ ಎಫ್ ಓ ಷಣ್ಮುಖ, ನೀರಾವರಿ ಇಲಾಖೆ ಎ ಇ ಇ ಪ್ರವೀಣ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಅರಣ್ಯದಲ್ಲಿ ನಡೆದು ಸ್ಥಳ ಪರಿಶೀಲನೆ ನಡೆಸಿದರು. ಇತಿಹಾಸವಿರುವ ಕೆರೆಗೆ ಹೊಸ ಕಾಯಕಲ್ಪ ರೂಪಿಸಲು ಚಿಂತನೆ ನಡೆಸಿದರು.
ಪರಿಶೀಲನಾ ವೇಳೆ ಕೆರೆಯ ಹೂಳು ತೆಗೆಯುವುದು, ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು, ಹಾಗೂ ಪರಿಸರ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ಕೆರೆಯ ಪುನಶ್ಚೇತನದಿಂದ ಕೃಷಿ ಕ್ಷೇತ್ರಕ್ಕೆ ಮಹತ್ವದ ನೆರವು ಲಭಿಸಲಿದೆ.
ಇದೇ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಗ್ರಾಮದ ಡಬಲ್ ರಸ್ತೆ ಕಾಮಗಾರಿಯನ್ನು ತಕ್ಷಣ ಪುನರಾರಂಭಿಸಲು, ಹಾಗೆಯೇ ರಸ್ತೆ ಒತ್ತುವರಿ ತೆರವು ಕಾರ್ಯವನ್ನು ತ್ವರಿತಗೊಳಿಸಲು ಶಾಸಕರು ನಿರ್ದೇಶನ ನೀಡಿದರು.



