ದಾವಣಗೆರೆ: ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಹಸಿರೆಲೆ ಗೊಬ್ಬರ ಬೆಳೆಯುವುದು ಅನಿವಾರ್ಯವಾಗಿದೆ. ಅಡಿಕೆ ಬೆಳೆಯಲ್ಲಿ ಮಣ್ಣು ಮತ್ತು ನೀರು ನಿರ್ವಹಣೆಗಾಗಿ ಹಸಿರೆಲೆ ಬೆಳೆ ಸೂಕ್ತ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಡಾ. ಬಸವನಗೌಡ ಎಂ ಜಿ ಅಭಿಪ್ರಾಯಪಟ್ಟರು.
ದಾವಣಗೆರೆ ತಾಲೂಕಿನ ಶ್ರೀ ರಾಮನಗರ (ಆಲೂರೂಹಟ್ಟಿ) ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಅಡಿಕೆ ತೋಟದಲ್ಲಿ ಹಸಿರೆಲೆ ಗೊಬ್ಬರಗಳ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಯಾಂಚ, ಸೆಣಬು ಹಾಗೂ ವೆಲ್ವೆಟ್ ಬೀನ್ಸ್ ಸೂಕ್ತ
ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಹಸಿರೆಲೆ ಗೊಬ್ಬರಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ. ಹಸಿರೆಲೆ ಗೊಬ್ಬರಗಳಾದ ದಯಾಂಚ, ಸೆಣಬು ಹಾಗೂ ವೆಲ್ವೆಟ್ ಬೀನ್ಸ್ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದರೆ ಮುಖ್ಯ ಬೆಳೆಗೆ ಎಲ್ಲಾ ಪೋಷಕಾಂಶಗಳನ್ನು ಒದಗಿಸಬಹುದು ಹಾಗೂ ವೆಲ್ವೆಟ್ ಬೀನ್ಸ್ ಯಾವ ರೀತಿ ಬೆಳೆಯುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ರೈತರಿಗೆ ತಿಳಿಸಿದರು.
ಕಳೆನಾಶಕದ ಬಳಕೆ ಕಡಿಮೆ ಮಾಡಿ
ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ ಓ ಮಾತನಾಡಿ, ವೆಲ್ವೆಟ್ ಬೀನ್ಸ್ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಬೆಳೆದರೆ ಕನಿಷ್ಠ 5 ರಿಂದ 6 ತಿಂಗಳು ಬೆಳೆ ಇರುತ್ತದೆ. ಹೊದಿಕೆ ಬೆಳೆಯಾಗಿ ಬೆಳೆಯುವುದರಿಂದ ಕಳೆನಾಶಕದ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಬೇಸಿಗೆಯಲ್ಲಿ ಮಾಡಬಹುದು ಎಂದರು.
ಕೃಷಿ ಇಲಾಖೆ ಸಿಗುವ ಸೌಲಭ್ಯ ಬಳಸಿಕೊಳ್ಳಿ
ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಮೂರ್ತಿ, ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ವಿಜ್ಞಾನಿಗಳು ಹೇಳುವ ರೀತಿಯಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದರು.ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಶಿಷ್ಟ ಜಾತಿ ಪ್ರಗತಿಪರ ಕೃಷಿಕರಿಗೆ ತಲಾ ನಾಲ್ಕು ಕೆಜಿ ಯಂತೆ ವೆಲ್ವೆಟ್ ಬೀನ್ಸ್ ಅನ್ನು ಆಯ್ದ 13 ರೈತ ಬಾಂಧವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಸಖಿಯರು ಹಾಗೂ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.



