ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಯ್ಲಿಗೆ ಬಂದ ಮೆಕ್ಕೆಜೋಳ (Maize crop) ಕಟಾವಿಗೆ ಮಳೆ (rain) ಅಡ್ಡಿಯಾಗಿದೆ.
ಕರಾವಳಿಯಲ್ಲಿ ಜೋರು ಮಳೆ
ಕರಾವಳಿಯ ಉಡುಪಿ,ಉತ್ತರ ಕನ್ನಡ ಜಿಲ್ಲೆಗೆ ಇಂದು (ಅ.27) ಆರೆಂಜ್ ಅಲರ್ಟ್ ನೀಡಲಾಗಿದ್ದು, ಗುಡುಗು, ಬಿರು ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಇದೇ ವೇಳೆ ಉತ್ತರ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಯಾವ ಜಿಲ್ಲೆಯಲ್ಲಿ ಮಳೆ..?
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು
ಮತ್ತು ಹಾಸನ ಜಿಲ್ಲೆಯಲ್ಲಿ ಭಾರಿಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ,ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯಲಿದೆ.
ಉತ್ತರ ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ..?
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಯಿದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ,ರಾಯ ಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ ಎಚ್ಚರಿಕೆ ನೀಡಲಾಗಿದೆ.
ಕಟಾವಿಗೆ ಮಳೆ ಅಡ್ಡಿ
ಮುಂಗಾರಿನ ಮಳೆಗೆ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ಬಹುತೇಕ ಕೊಯ್ಲಿಗೆ ಬಂದಿದೆ. ಕಟಾವಿಗೆ ಬಂದ ಮೆಕ್ಕೆಜೋಳ ಕೊಯ್ಲಿಗೆ ಹಿಂಗಾರು ಮಳೆ ಅಡ್ಡಿಯಾಗಿದ್ದು, ರೈತರ ಸಂಕಷ್ಠಕ್ಕೆ ಸಿಲುಕಿದ್ದಾರೆ. ಒಂದೆಡೆ ದರಕುಸಿತ, ಮತ್ತೊಂದೆಡೆ ನಿರಂತರ ಮಳೆಯಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.



