ಡಿವಿಜಿ ಸುದ್ದಿ, ಬೆಂಗಳೂರು: ಜನರ ಪ್ರೀತಿಯ `ರಾಜಾಹುಲಿ’ ಸಿಎಂ ಯಡಿಯೂರಪ್ಪ ಬರ್ತ್ ಡೇಗೆ ` ಹೌದು ಹುಲಿಯಾ’ ಖ್ಯಾತಿಯ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬ ಶುಭ ಕೋರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ನಂತರ ಯಡಿಯೂರಪ್ಪ ಅವರು ತಾವೇ ಕೈ ಹಿಡಿದು ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.
ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಪ್ರೀತಿಯ ಯಡಿಯೂರಪ್ಪ ಅವರಿಗೆ 77ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ರಾಜಕೀಯ ಹೋರಾಟವನ್ನೇ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಯಶಸ್ಸನ್ನು ಸಾಧಿಸಿದ ನಿಮಗೆ, ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಒದಗಿ ಬರಲಿ, ಜೊತೆಗೆ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಆಶಿಸುವೆ ಎಂದು ತಿಳಿಸಿದ್ದರು.
ಯಡಿಯೂರಪ್ಪ ಅವರು ತಮ್ಮ ಹುಟ್ಟುಹಬ್ಬದ ದಿನವೇ ತಮ್ಮ ಅದೃಷ್ಟದ ಕಾವೇರಿ ನಿವಾಸಕ್ಕೆ ಪ್ರವೇಶ ಮಾಡಿದ್ದಾರೆ. ಇಂದು ಬೆಳಗ್ಗೆ ಬಿಎಸ್‍ವೈ ಅವರು ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದು, ಗೃಹ ಪ್ರವೇಶ ಪೂಜೆ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರು ಕಾವೇರಿ ನಿವಾಸದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸವಿದ್ದರು. ಸಿದ್ದರಾಮಯ್ಯ ಇದೀಗ ಮನೆ ಖಾಲಿ ಮಾಡಿದ್ದು, ಬಿಎಸ್ ವೈ ಕಾವೇರಿ ನಿವಾಸಕ್ಕೆ ಗೃಹ ಪ್ರವೇಶ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಬಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿ.ಎಲ್.ಸಂತೋಷ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.