ಡಿವಿಜಿ ಸುದ್ದಿ, ಕೋಲಾರ: ಪಾದ ಪೂಜೆಗೆ ಬಂದಿದ್ದ 20 ವರ್ಷದ ಭಕ್ತೆ ಜೊತೆ ಸ್ವಾಮೀಜಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದರು. 20 ವರ್ಷದ ಶ್ಯಾಮಲ ಜೊತೆ ಪರಾರಿಯಾಗಿರಬಹುದು ಎಂದು ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದಾರೆ.

ಸ್ವಾಮೀಜಿ ಮೂಲತಃ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರು ಎನ್ನಲಾಗಿದ್ದು, ಸ್ವಾಮೀಜಿ ಜೊತೆ ಯುವತಿ ನಾಪತ್ತೆಯಾಗಿರಬೇಕು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಜನವರಿ 15 ರಂದು ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಸ್ವಾಮೀಜಿ, ದೇವಾಲಯ ಅಭಿವೃದ್ಧಿ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಮಾಡುತ್ತೇನೆ ಎಂಬುದಾಗಿ ಜನರಲ್ಲಿ ನಂಬಿಕೆ ಹುಟ್ಟಿಸಿದ್ದರು.
ಗ್ರಾಮಸ್ಥರೆಲ್ಲರು ಸೇರಿ ದೇವಸ್ಥಾನ ಅಭಿವೃದ್ಧಿ ಮಾಡಿ, ಅದ್ಧೂರಿಯಾಗಿ ಜಾತ್ರೆ ಮಾಡಿದ್ದರು. ನಂತರ ಮಹಾ ಶಿವರಾತ್ರಿ ಹಬ್ಬದಂದು ಸಂಭ್ರಮದಿಂದ ಆಚರಿಸಲಾಗಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಸ್ವಾಮೀಜಿ ಹಾಗೂ ಯುವತಿ ಕಣ್ಮರೆಯಾಗಿದ್ದಾರೆ. ಯುವತಿ ನಾಪತ್ತೆಯಾಗಿರುವುದಕ್ಕೂ ಸ್ವಾಮೀಜಿ ಕಾಣೆಯಾಗಿರುವುದಕ್ಕೂ ಸಂಬಂಧ ಇದೆ ಎನ್ನಲಾಗಿದೆ. ಮಾತ್ರವಲ್ಲದೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯುವತಿ ಸಂಬಂಧಿಕರು ದೂರು ದಾಖಲಾಗಿದೆ.



