Connect with us

Dvgsuddi Kannada | online news portal | Kannada news online

ದಾವಣಗೆರೆ: ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 5 ಎಕರೆ ಜಾಗ; ದೂಡಾದಿಂದ ಅಪಾರ್ಟ್‍ಮೆಂಟ್‍ ; ಜಿಲ್ಲಾ ಉಸ್ತುವಾರಿ ಸಚಿವ

davangere smart city

ದಾವಣಗೆರೆ

ದಾವಣಗೆರೆ: ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 5 ಎಕರೆ ಜಾಗ; ದೂಡಾದಿಂದ ಅಪಾರ್ಟ್‍ಮೆಂಟ್‍ ; ಜಿಲ್ಲಾ ಉಸ್ತುವಾರಿ ಸಚಿವ

ದಾವಣಗೆರೆ: ದಾವಣಗೆರೆ ನಗರವನ್ನು ಸುಂದರವಾಗಿಸಲು ಸುತ್ತಲೂ ವರ್ತುಲ ರಸ್ತೆಗಳನ್ನು ನಿರ್ಮಿಸಲಾಗಿದ್ದು ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಆದಷ್ಟು ಶೀಘ್ರವಾಗಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 4 ರಿಂದ 5 ಎಕರೆ ಜಾಗವನ್ನು ಗುರುತಿಸಲು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೂಚನೆ ನೀಡಿದರು.

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ (ದೂಡಾ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾವಣಗೆರೆಯಲ್ಲಿ ಟ್ರಕ್ ಟರ್ಮಿನಲ್‍ನ ಕೊರತೆ ಇದ್ದು ಅನೇಕ ದಿನಗಳ ಬೇಡಿಕೆ ಇದಾಗಿದೆ. ನಗರಾಭಿವೃದ್ದಿ ಪ್ರಾಧಿಕಾರದಿಂದಲೇ ಇದಕ್ಕೆ ಬೇಕಾದ ಕನಿಷ್ಠ 4-5 ಎಕರೆ ಜಾಗವನ್ನು ಗುರುತಿಸಬೇಕೆಂದರು.

ದೂಡಾದಿಂದ ಅಪಾರ್ಟ್‍ಮೆಂಟ್‍; ಖಾಸಗಿ ಸಹಭಾಗಿತ್ವದಲ್ಲಿ ಹೊಸ ಬಡಾವಣೆ

ದಾವಣಗೆರೆ ನಗರ ಪಾಲಿಕೆಯಾಗಿದ್ದು ಸ್ಮಾರ್ಟ್‍ಸಿಟಿಯಾಗಿದೆ, ಇಲ್ಲಿ ಬಡವರು, ಮಧ್ಯಮ ವರ್ಗದವರೂ ಕೈಗೆಟಕುವ ದರದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಲು ಮತ್ತು ವಾಸಿಸಲು ಅನುಕೂಲವಾಗುವಂತೆ ಪ್ರಾಧಿಕಾರದಿಂದ ಅಪಾರ್ಟ್‍ಮೆಂಟ್‍ಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ. ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿಯು ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲು ಸಹ ಉದ್ದೇಶಿಸಲಾಗಿದೆ ಎಂದರು.

ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣ

ಅತ್ಯಾಧುನಿಕವಾಗಿ ನಗರದ ವಿನ್ಯಾಸವನ್ನು ನಿರ್ಮಾಣ ಮಾಡುವುದು ಮತ್ತು ಒಳಚರಂಡಿ, ನೀರಿನ ಸಂಪರ್ಕ, ರಸ್ತೆ ಸಂಪರ್ಕ, ವಾಯುವಿಹಾರಕ್ಕೆ ಉದ್ಯಾನವನಗಳ ನಿರ್ಮಾಣ ಸೇರಿದಂತೆ ನಗರವನ್ನು ಸ್ವಚ್ಚ ಮತ್ತು ಸುಂದರವಾಗಿ ನಿರ್ಮಾಣ ಮಾಡುವಲ್ಲಿ ಪ್ರಾಧಿಕಾರದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿನ್ಯಾಸಗಳನ್ನು ಪರಿಶೀಲನೆ ನಡೆಸಿ ಭವಿಷ್ಯದ ದೃಷ್ಟಿಯಿಂದ ನೂತನ ಬಡಾವಣೆಗಳಿಗೆ ಅನುಮೋದನೆ ನೀಡಬೇಕು ಎಂದರು.

ಸುರಕ್ಷತೆಗೆ ಆದ್ಯತೆ

ಸ್ಮಾರ್ಟ್‍ಸಿಟಿ ಯೋಜನೆಯಡಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ನಗರದಲ್ಲಿ ನಡೆಯುತ್ತಿದ್ದ ಅನೇಕ ಕಳ್ಳತನ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳ ಇಳಿಕೆಯಾಗಲು ಕಾರಣವಾಗಿದೆ. ರಾಜ್ಯದಲ್ಲಿ 6 ನಗರಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸರ್ಕಾರ ಉದ್ದೇಶಿಸಿದ್ದು ಇದರಲ್ಲಿ ದಾವಣಗೆರೆಯು ಪ್ರಾಯೋಗಿಕ ಯೋಜನೆಯಲ್ಲಿ ಸೇರಿದೆ ಎಂದರು.

ಜೂನ್ 16ರಂದು ದಾವಣಗೆರೆಗೆ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 16 ರಂದು ದಾವಣಗೆರೆಗೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಈ ಬಗ್ಗೆ ವಿವರವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಹಿರಿಯರು ಹಾಗೂ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅವರ 95 ನೇ ಜನ್ಮ ದಿನಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸುತ್ತಿದ್ದು ಇನ್ನು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಾಶಾಂತ್, ಪ್ರಾಧಿಕಾರದ ಸದಸ್ಯರಾದ ವಾಣಿ ಎಂ.ಆರ್, ಎಂ.ಮಂಜುನಾಥ್, ಗಿರೀಶ್ ಹೆಚ್ ಹಾಗೂ ಇನ್ನಿತರೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top