ದಾವಣಗೆರೆ: ದ್ವಿತೀಯ ಪಿಯುಸಿ ನಂತರ ಕೃಷಿ ಪದವಿ ಕೋರ್ಸ್ (agriculture degree) ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸ್ವ-ಉದ್ಯೋಗ ಅವಕಾಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಕೃಷಿ ಪದವಿಗಳು ಸಹಾಯವಾಗುತ್ತವೆ ಎಂದು ಐಸಿಆರ್ ತಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಬಸವನಗೌಡ ಎಂ ಜಿ ತಿಳಿಸಿದರು.
ಐಸಿಆರ್ ತಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಕೃಷಿ ಪದವಿಗಳ ಬಗ್ಗೆ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಿಂದ ಕೇಂದ್ರದಿಂದ ಈ ಜಾಗೃತಿ ಸಿಬಿರವನ್ನು ನಡೆಸುತ್ತಿದ್ದು ರೈತರ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಹಾಗೂ ಕೃಷಿ ಪದವಿಗಳಲ್ಲಿ ಆಸಕ್ತಿಯನ್ನು ಹುಟ್ಟಿಸಲು ಇದು ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಡಾಕ್ಟರ್ ರಾಘವೇಂದ್ರ ಪ್ರಸಾದ್ ಮಾತನಾಡಿ, ಎಲ್ಲಾ ಪದವಿಗಳಲ್ಲಿಯೂ ಸಹ ಉತ್ತಮ ಅಂಕ ಗಳಿಸುವುದು ಒಂದು ಮಾನದಂಡವಾದರೆ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು ಅಂಕಕ್ಕಿಂತ ಕೌಶಲ್ಯ ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾಕ್ಟರ್ ಟಿ ಎನ್ ದೇವರಾಜ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿಗೆ ಅಂಟಿಕೊಳ್ಳದೆ, ಉದ್ಯಮಿಗಳಾಗಲು ಶ್ರಮಿಸಬೇಕು ಎಂದು ತಿಳಿಸಿದರು. ಕೇಂದ್ರ ಸದಾ ರೈತರಿಗೆ ಮತ್ತು ರೈತರ ಮಕ್ಕಳಿಗೆ ಕೃಷಿ ತಂತ್ರಜ್ಞಾನಗಳ ಪರಿಚಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾಕ್ಟರ್ ಅವಿನಾಶ್ ಟಿ ಜಿ, ಡಾ. ಸುಪ್ರಿಯಾ ಪಾಟೀಲ್ , 180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.