ಡಿವಿಜಿ ಸುದ್ದಿ, ದಾವಣಗೆರೆ: ನೂತನ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಂಗಳೂರು ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ತರಳಬಾಳು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಶ್ರೀಗಳ ರೈತ ಮುಖಿ ಹಾಗೂ ಸಮಾಜಮುಖಿ ಕಾರ್ಯಗಳ ಸೇವೆಯನ್ನು ಶ್ರದ್ದೆಯಿಂದ ಸ್ಮರಿಸಿದ ಸಚಿವ ಬಿ.ಸಿ ಪಾಟೀಲ್, ರೈತನ ಮಗನಾಗಿ ಕೃಷಿ ಖಾತೆ ನೀಡಿದ್ದುಅತೀವ ಸಂತಸವಾಗಿದೆ. ತುಂಬಾ ಆಸಕ್ತಿಯಿಂದ ಈ ಖಾತೆ ಪಡೆದಿದ್ದೇನೆ ಎಂದು ಶ್ರೀಗಳ ಜೊತೆ ಹಂಚಿಕೊಂಡರು. ರೈತರ ಸಂಕಷ್ಟಗಳಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ರೈತರ ಜೀವನ ಉಜ್ವಲವಾವಾಗಲು ನಿರಂತರವಾಗಿ ಮಾರ್ಗದರ್ಶನ ಮಾಡುವಂತೆ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದರು.

ಆಶೀರ್ವಾದ ದಯಪಾಲಿಸಿ ಮಾತನಾಡಿದ ತರಳಬಾಳು ಶ್ರೀಗಳು, ನಾಡಿನ ರೈತ ಬಂಧುಗಳ ಉನ್ನತಿಗೆ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ, ಉತ್ಪತ್ತಿಯಾದ ಬೆಳೆಗಳನ್ನು ಸೂಕ್ತವಾಗಿ ಸಂರಕ್ಷಣೆ ಮಾಡವ ಆಧುನಿಕ ವ್ಯವಸ್ಥೆ ಕಲ್ಪಿಸಿ, ಅಗತ್ಯವಿದ್ದಾಗ ಮಾರಾಟ ಮಾಡುವ ವ್ಯವಸ್ಥೆಯ ಅನುಕೂಲ ಮಾಡುವಂತಹ ವಿಶೇಷ ಯೋಜನೆಗಳನ್ನು ರೂಪಿಸಿದರೆ ರೈತರ ಬಾಳು ಬಂಗಾರವಾಗುತ್ತದೆ. ರೈತರಿಗೆ ಮಾದರಿಯಾಗುವಂತಹ ವಿಶೇಷ ಯೋಜನೆಗಳನ್ನು ರೂಪಿಸಲು ತಿಳಿಸಿದರು.
ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿದಾಗ ಅಂತರ್ಜಲ ವೃದ್ದಿಯಾಗುತ್ತದೆ. ಈ ನಿಟ್ಟಿನಲ್ಲಿ ನದಿಗಳಿಂದ ಕರೆಗಳನ್ನು ತುಂಬಿಸುವ ಶಾಶ್ವತ ಯೋಜನೆಗಳಿಗೆ ಕ್ರಮ ವಹಿಸುವಂತೆ ತಿಳಿಸಿದರು. ಉತ್ತಮ ಗುಣಮಟ್ಟದ ಬೆಳೆಯ ಬೀಜಗಳ ವಿತರಣೆ, ಬೆಳೆ ಪರಿಹಾರದಲ್ಲಿರುವ ಗೊಂದಲಗಳಿಗೆ ನಿಖರವಾದ ಯೋಜನೆಯನ್ನು ರೂಪಿಸಲು ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.
ಈ ಹಿಂದೆ ನಾವು ಭೂಮಿ ಆನ್ ಲೈನ್ ತಂತ್ರಾಂಶವನ್ನು ಮೂರು ತಿಂಗಳು ಶ್ರಮವಹಿಸಿ ಸರ್ಕಾರದ ಕಂದಾಯ ಇಲಾಖೆಗೆ ಉಚಿತವಾಗಿ ನೀಡಿದರ ಪರಿಣಾಮ ಮೂರು ಸಾವಿರ ಕೋಟಿಗೂ ಅಧಿಕ ಹಣವು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರವೇ ರೈತರ ಖಾತೆಗಳಿಗೆ ಜಮಾ ಮಾಡಿದುದರಿಂದ ರೈತರಿಗೆ ಪರಿಹಾರದ ಹಣವು ಸಮರ್ಪಕವಾಗಿ ದೂರೆತಂತಾಯಿತು. ಇದೊಂದು ಮಾದರಿ ಕಾರ್ಯವಾಗಿದ್ದು ದೇಶದ ಎಲ್ಲಾ ರಾಜ್ಯಗಳು, ಈ ಮಾದರಿ ಅನುಸರಿಸಿದರೆ ಲಂಚದ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪಲು ಸಹಾಯಕವಾಗುತ್ತದೆ ಎಂದರು.
ಜಾನುವಾರು ಸಂಕುಲದ ಸಂರಕ್ಷಣೆಗೆ ಹಾಗೂ ಏತನೀರಾವರಿಯಂತಹ ಕೆರೆತುಂಬಿಸುವ ನೀರು ವ್ಯರ್ಥವಾಗಿ ಹರಿಯದಂತೆ ಸಂರಕ್ಷಣೆ ಮತ್ತು ನಿರ್ವಹಣೆಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕ್ರಮವಹಿಸಲು ಶ್ರೀ ಜಗದ್ಗುರುಗಳು ನೂತನ ಸಚಿವರಿಗೆ ಸೂಚಿಸಿದರು.



