ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯಿಂದ ಮಾರ್ಚ್ 15 ರಂದು ದಾವಣಗೆರೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು ಐದು ಸಾವಿರಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ದಾವಣಗೆರೆ: ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಕುರಿತು ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉದ್ಯೋಗ ಮೇಳವು ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಈ ಎರಡು ಕಡೆ ನಡೆಯಲಿದೆ. ಬಿಐಟಿಯಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು ಐಟಐ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಆಯ್ಕೆ ನಡೆಯಲಿದೆ ಎಂದರು.
ಇಂದಿನ ರಾಶಿ ಭವಿಷ್ಯ
ಬೃಹತ್ ಉದ್ಯೋಗ ಮೇಳದಲ್ಲಿ 50 ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿವೆ. ಆದ್ದರಿಂದ ಜಿಲ್ಲೆಯ ನಿರುದ್ಯೋಗಿಗಳಿಗೆ ಮೇಳ ವರದಾನವಾಗಿದೆ. ಮೇಳದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಂಪನಿಗಳು ಭಾಗವಹಿಸುತ್ತಿವೆ. ಜಿಲ್ಲೆಯ 1000 ಕ್ಕೂ ಹೆಚ್ಚಿನ ಯುವಕ, ಯುವತಿಯರು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಸಿದ್ದು ಎಲ್ಲಾ ದಾಖಲೆಗಳೊಂದಿಗೆ ನೇರವಾಗಿಯು ಭಾಗವಹಿಸಲು ಅವಕಾಶ ಇದೆ. ಆಗಮಿಸುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 6 ಸಾವಿರಕ್ಕಿಂತಲೂ ಹೆಚ್ಚು ಪದವಿ, ಡಿಪ್ಲೊಮಾ ಪಾಸಾದವರಿಗೆ ಯುವನಿಧಿಯಡಿ ನಿರುದ್ಯೋಗ ಭತ್ಯೆ ನೀಡುತ್ತಿದ್ದು ಇವರೆಲ್ಲರಿಗೂ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆರಂಭವಾಗಲಿದ್ದು ಜಿಲ್ಲೆಯ ಅರ್ಹ ಅಭ್ಯರ್ಥಿಗಳು ನೇರವಾಗಿಯು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಪ್ರತಿ ವರ್ಷವು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗವನ್ನರಸಿ ದೇಶ, ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ಗಮನಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕೌಶಲ್ಯ ಮತ್ತು ನೈಪುಣ್ಯತೆ ಹೊಂದಿರುವ ವಿದ್ಯಾವಂತ ಯುವ ಜನರಿಗೆ, ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈಗಾಗಲೇ https://tinyurl.com/mnm8vykz ಜಾಲತಾಣದಲ್ಲಿ ಆನ್‍ಲೈನ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಸಂದರ್ಶನಕ್ಕಾಗಿ 40 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಸ್ವಚ್ಚತೆ, ಕುಡಿಯುವ ನೀರು, ಆರೋಗ್ಯ ಸುರಕ್ಷತೆ, ಲಘು ಉಪಹಾರ ಸೇರಿದಂತೆ ಎಲ್ಲಾ ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ನಗರದ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 15 ರಿಂದ 5 ದಿನಗಳ ಕಾಲ 20 ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿರುವ ವಸ್ತುಗಳ ಮಾರಾಟಕ್ಕಾಗಿ ಮಾಸಿಕ ಸಂತೆಯನ್ನು ಏರ್ಪಡಿಸಲಾಗಿದೆ.
ಮಾರ್ಚ್ 14 ಮತ್ತು 15 ರಂದು ಎಲ್ಲಾ ಬ್ಯಾಂಕ್‍ಗಳ ಮೂಲಕ ಎಲ್ಲಾ ನಾಗರಿಕರಿಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೊಂದಾಯಿಸಲು ಬೃಹತ್ ಶಿಬಿರ ಮಾಡಲಾಗುತ್ತಿದೆ. ಈ ಎರಡೂ ವಿಮೆ ಮಾಡಿಸುವುದರಿಂದ ಅಪಘಾತ, ಮರಣ ಹೊಂದಿದಾಗ ಪರಿಹಾರ ಸಿಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಶರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.