ದಾವಣಗೆರೆ: ಜಿಲ್ಲೆಯಲ್ಲಿ ಎನ್‍ಆರ್‍ಎಲ್‍ಎಂ ಅಡಿ 9,700 ಸ್ವಹಾಯ ಸಂಘಗಳು ಇವೆ. ಇದರಲ್ಲಿ ದಾವಣಗೆರೆ ತಾಲೂಕಿನಲ್ಲಿ 1861 ಸ್ವಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಒಟ್ಟು ರೂ. 11 ಕೋಟಿ 80 ಲಕ್ಷ ಸಮುದಾಯ ಬಂಡವಾಳನಿಧಿ ಸರ್ಕಾರದಿಂದ ಬಿಡುಗಡೆಯಾಗಿದೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಆವರಣದಲ್ಲಿನ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯ ಸಂಜೀವಿನಿ ಸ್ವ ಸಹಾಯ ಸಂಘಗಳಿಗೆ ವಿವಿಧ ಬ್ಯಾಂಕ್‍ಗಳ ಮೂಲಕ ಏರ್ಪಡಿಸಲಾದ ಸಾಲ ಮೇಳ ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಲು ಸುತ್ತುನಿಧಿ, ಸಮುದಾಯ ಬಂಡವಾಳನಿಧಿ, ಹಾಗೂ ಸರ್ಕಾರದ ಆರ್ಥಿಕ ನೆರವು ಒದಗಿಸುವ ಸಂಜೀವಿನಿ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರವಹಿಸಿವೆ ಎಂದರು.
ಸಂಜೀವಿನಿ ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್‍ಗಳಿಂದ ಸಾಲವನ್ನು ಕೊಡಲಾಗುತ್ತವೆ. ಸಾಲ ಪಡೆದು ಉತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಸದೃಡವಾಗಿ ನೋಡಿಕೊಳ್ಳಲು ಸಂಜೀವಿನಿ ಸಂಘದಿಂದ ಮಾತ್ರ ಸಾಧ್ಯವಾಗಿದೆ ಎಂದು ಮಹಿಳೆಯರಿಗೆ ತಿಳಿದರು.
ಸಾಲಮೇಳದಲ್ಲಿ 170 ಸ್ವ ಸಹಾಯ ಸಂಘಗಳಿಂದ ಸಾಲ ಮಂಜೂರಾತಿಗಾಗಿ ಅರ್ಜಿ ಸ್ವೀಕರಿಸಲಾಗಿದ್ದು ಬ್ಯಾಂಕ್‍ಗಳು ಪರಿಶೀಲನೆ ನಡೆಸಿ ಚಟುವಟಿಕೆಯನ್ನಾಧರಿಸಿ ಮಂಜೂರಾತಿ ನೀಡಲಿವೆ ಎಂದರು.
ಸಾಲ ಮೇಳದಲ್ಲಿ ಕೆನರಾ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಯೂನಿಯನ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಇನ್ನಿತರೆ ಬ್ಯಾಂಕ್‍ಗಳು ಮೇಳದಲ್ಲಿ ಭಾಗವಹಿಸಿದ್ದವು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮ ಕೌಸರ್, ಅಭಿಯಾನ ಮ್ಯಾನೇಜರ್ ಬೋಜರಾಜ್, ಸಂಜೀವಿನಿ ಸ್ವಸಹಾಯ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.



