ದಾವಣಗೆರೆ: ವರುಷದ ಸಂಭ್ರಮದಲ್ಲಿರುವ ಜಿಎಂ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಲಭ್ಯತೆ ಮತ್ತು ಪ್ರಗತಿಯ ಹೆಜ್ಜೆ ಗುರುತಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ತಿಳಿಯಬಹುದಾದ ಮುಕ್ತತೆಯ ದಿನ “ಓಪನ್ ಡೇ” ಕಾರ್ಯಕ್ರಮವನ್ನು ಇದೇ ಡಿಸೇಂಬರ್ 13 ಮತ್ತು 14 ಈ ಎರಡು ದಿನಗಳು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಎಂ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ನಿರ್ದೇಶಕರಾದ ಟಿ.ಎಂ. ವೀರ ಗಂಗಾಧರ ಸ್ವಾಮಿ, ಪ್ರೊ. ತೇಜಸ್ವಿ ಕಟ್ಟಿಮನಿ ಟಿ.ಆರ್., ಈ ಕಾರ್ಯಕ್ರಮವನ್ನು ಎರಡನೇ ಬಾರಿ ನಡೆಸಲಾಗುತ್ತಿದ್ದು, ಎರಡು ದಿನಗಳೂ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೂ ನಡೆಯಲಿದ್ದು, ಜಿಎಂ ವಿಶ್ವವಿದ್ಯಾಲಯವಾಗಿ ವರುಷಗಳಾಗಿದ್ದು, ವಿವಿಧ ವಿಭಾಗಗಳಲ್ಲಿ ಕೋರ್ಸ್ ಗಳ ಪ್ರಾರಂಭಿಸಲಾಗಿದೆ. 42 ಯುಜಿ, 18 ಪಿಜಿ ಕೋರ್ಸ್ ಗಳಿದ್ದು, ಈ ಎಲ್ಲ ಕೋರ್ಸ್ ಗಳ ಬಗ್ಗೆ ಆಯಾ ವಿಭಾಗಗಳ ಡೀನ್ ಗಳು, ಹೆಚ್ಒಡಿ, ಪ್ರೊಫೆಸರ್ ಗಳು, ನಿರ್ದೇಶಕರು ಮಾಹಿತಿ ನೀಡುವರು.
ಶೈಕ್ಷಣಿಕ ಕಾರ್ಯಕ್ರಮಗಳ ಲಭ್ಯತೆ ಬಗ್ಗೆ ಮಾಹಿತಿ ತಿಳಿಯುವ ಕ್ಯಾಂಪಸ್ ಟೂರ್ ಹಮ್ಮಿಕೊಳ್ಳಲಾಗಿದ್ದು, ಈ ಓಪನ್ ಡೇಗೆ ಜಿಲ್ಲೆಯ ವಿವಿಧೆಡೆಗಳಿಂದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸುವರು. ಸುಮಾರು 30 ವಿವಿಧ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವರೆಲ್ಲಾ ಭಾಗವಹಿಸಲು ಜಿಎಂ ವಿಶ್ವವಿದ್ಯಾಲಯದಿಂದ ವಾಹನ ವ್ಯವಸ್ಥೆ ಸಹ ಮಾಡಲಾಗಿದೆ.
ಎಸ್ ಎಸ್ ಎಲ್ ಸಿ, ಐಟಿಐ, ಪಿಯುಸಿ, ಡಿಪ್ಲೋಮೋ ಮತ್ತು ಯಾವುದೇ ಪದವಿಯಾದ ವಿದ್ಯಾರ್ಥಿಗಳಿಗೆ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಅನುಭವಿ ಉಪನ್ಯಾಸಕರುಗಳಿಂದ ಮಾಹಿತಿ ಕೂಡ ದೊರಕುತ್ತದೆ. ವೃತ್ತಿಪರ ಶಿಕ್ಷಣದ ಕೋರ್ಸ್ ಗಳ ಅನುಕೂಲಗಳು ಹಾಗೂ ಪ್ಲೇಸ್ಮೆಂಟ್ ಬಗ್ಗೆ ತಿಳಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರೇರಕ ಭಾಷಣಕಾರರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಾರೆ. ಜಿಎಂ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಅವರು ಮಾಡಿರುವ ಪ್ರಾಜೆಕ್ಟ್ ಎಕ್ಸಿಬಿಷನ್ ಕೂಡ ಇರುತ್ತದೆ.
ಡಿಸೇಂಬರ್ 13ರ ಬೆಳಗ್ಗೆ 9.30 ಗಂಟೆಗೆ ಈ ಓಪನ್ ಡೇ ಉದ್ಘಾಟನೆ ನಡೆಯಲಿದೆ. ಓಪನ್ ಡೇಯಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು, ಜಿಎಂ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ನೋಂದಣಿ ಕಾರ್ಯ ನಡೆಯಲಿದೆ.
ಈ ಎರಡೂ ದಿನವೂ ಮನರಂಜನೆ ಕಾರ್ಯಕ್ರಮ ನಡೆಯಲಿದ್ದು, ಎರಡನೇ ದಿನ ಸಂಜೆ ವಿಶೇಷವಾಗಿ ರಾಪರ್ ಸಿಂಗರ್ ರಾಹುಲ್ ಡಿಟ್-ಓ ಅವರಿಂದ ರಾಪರ್ ಗೀತೆಗಳ ಮನರಂಜನೆ ನಡೆಯಲಿದೆ. ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್. ಬಸವರಾಜು ಮಾತನಾಡಿ, ಕೆಸಿಇಟಿಯಲ್ಲಿ ಉನ್ನತ 2 ಸಾವಿರದೊಳಗೆ ಶ್ರೇಣಿಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಬೋದನಾ ಶುಲ್ಕ ವಿನಾಯಿತಿ, ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೇ, 75ರಷ್ಟು ಬೋದನಾ ಶುಲ್ಕ ಮನ್ನಾ, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭ್ಯ. ಇವು ಜಿಎಂಯು ಕೊಡುಗೆಗಳಾಗಿವೆ ಎಂದರು.
ಓಪನ್ ಡೇ ಯಂದು ವಿದ್ಯಾರ್ಥಿಗಳು ಪ್ರವೇಶವನ್ನು ಆರಿಸಿಕೊಳ್ಳಲಿದ್ದು, ಅವರ ಪಿಯುಸಿ ಕಾರ್ಯಕ್ಷಮತೆ ಆಧಾರದ ಮೇಲೆ ಶುಲ್ಕ ರಿಯಾಯಿತಿಗಳನ್ನು ಪಡೆಯಬಹುದು. ಇವು ಓಪನ್ ಡೇ ಕೊಡುಗೆಗಳಾಗಿವೆ. ವೃತ್ತಿ ಅವಕಾಶಗಳನ್ನು ಕಲಿಯಲು ಉತ್ತಮ ಅವಕಾಶ, ಪ್ರೇರಕ ಭಾಷಣ ಮತ್ತು ಕ್ಯಾಂಪಸ್ ಪ್ರವಾಸ, ಓಪನ್ ಡೇ ದಿನದಂದು ನಿಮ್ಮ ಆಸನವನ್ನು ಕಾಯ್ದಿರಿಸಿ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳುವುದು ಓಪನ್ ಡೇ ಇವೆಂಟ್ನ ಪ್ರಮುಖ ಅಂಶಗಳಾಗಿವೆ ಎಂದರು.
ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಯಿತು. ಈ ಸಂಧರ್ಭದಲ್ಲಿ ಜಿಎಂಯು ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ. ಎಸ್. ವಸಂತ್ ಕುಮಾರ್ ಇದ್ದರು.