ಡಿವಿಜಿ ಸುದ್ದಿ, ನ್ಯಾಮತಿ: ಮಾರ್ಚ್ 05 ರಂದು ಮಂಡನೆ ಆಗಲಿರುವ ಬಜೆಟ್ ನಲ್ಲಿ ಲಂಬಾಣಿ ಸಮುದಾಯದ ಸಮಗ್ರ ಅಭಿವೃದ್ಧಿಗೆ 100 ಕೋಟಿ ಅನುದಾನ ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ 281 ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಂಬಾಣಿ ಸಮುದಾಯ ಗೌರವ, ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಲಂಬಾಣಿ ಸಮುದಾಯದ ಸಮಗ್ರ ಅಭಿವೃದ್ಧಿಗೆ 100 ಕೋಟಿ ಅನುದಾನ ಮೀಸಲಿಡಲು ತೀರ್ಮಾನಿಸಿದ್ದೇನೆ. ಮುಂದಿನ ಮೂರು ವರ್ಷ ಲಂಬಾಣಿ ಸಮುದಾಯ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದ್ದು, ಲಂಬಾಣಿ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಲಂಬಾಣಿ ಭಾಷಾ ಅಕಾಡೆಮಿ ಸ್ಥಾಪಿಸಲಾಗುವುದು. ಕನ್ನಡ ಸಂಸ್ಕೃತಿ ಇಲಾಖೆ ಈಗಾಗಲೇ ಪ್ರಸ್ತಾವನೆ ಸಿದ್ಧಗೊಳಿಸುತ್ತಿದೆ. ಇನ್ನು ಲಂಬಾಣಿ ಸಮುದಾಯ ಗೂಳೆ ಹೋಗುವುದನ್ನು ತಡೆದು, ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲು ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು . ಬೀದರ್ ನಲ್ಲಿ ಲಂಬಾಣಿ ಸಮುದಾಯದ ಬೃಹತ್ ಸಿದ್ಧ ಉಡುಪು ತಯಾರಿಕ ಘಟಕ ತೆರಯಲಾಗುವುದು ಭರವಸೆ ನೀಡಿದರು.




