ಬಾಗಲಕೋಟೆ: ಖಂಡ್ರೆ, ಶಾಮನೂರು, ಯಡಿಯೂರಪ್ಪ ಬಸವಣ್ಣ ಹೆಸರು ಹೇಳಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪಗೆ ಮಾತ್ರ ಸೀಮಿತವಾಗಿದೆ. ಇವರು ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿಲ್ಲ. ಈ ಮೂವರು ಲಿಂಗಾಯತ ಸಮುದಾಯಕ್ಕೆ ತೊಂದರೆಯಾದಾಗ ಬರಲಿಲ್ಲ ಎಂದು ಕಿಡಿಕಾರಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಾಯಕರು ಡೋಂಗಿ ನಾಟಕ ಮಾಡುತ್ತಿದ್ದಾರೆ. ವಕ್ಫ್ ಹೆಸರಿನಲ್ಲಿ ಲಿಂಗಾಯತ ಸಮುದಾಯದ ಮಠಗಳನ್ನು ನುಂಗುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಇವರು ಯಾಕೆ ಬಂದಿಲ್ಲ. ತಾಕತ್ತಿದ್ದರೆ ಬನ್ನಿ.., ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲಿಸಿ ಎಂದು ಸವಾಲು ಹಾಕಿದರು.
ಬಾಗಲಕೋಟೆ, ವಿಜಯಪುರ ಜಿಲ್ಲೆಯವರಿಗೆ ಬಸವಣ್ಣನವರಿಗೆ ಕೊನೆ ದಿನಗಳಲ್ಲಿ ಏನಾಗಿತ್ತು ಎಂಬುದು ಗೊತ್ತು. ಸಾವಿರಾರು ವರ್ಷಗಳಿಂದ ಹಿರಿಯರು ಹೇಳಿಕೊಂಡು ಬರುತ್ತಿದ್ದಾರೆ. ಇವರಿಗೇನೂ ಗೊತ್ತಿದೆ.ಬಸವಣ್ಣನವರ ಕೊನೆ ದಿನಗಳ ಕುರಿತಂತೆ ನಾನು ಆಡಿರುವ ಮಾತು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಕ್ಷಮೆಯನ್ನೂ ಕೇಳೋದಿಲ್ಲ, ವಿಷಾದದ ಮಾತೇ ಇಲ್ಲ. ನನ್ನ ಮಾತಿಗೆ ಬದ್ಧನಿದ್ದೇನೆ ಎಂದರು.



