ದಾವಣಗೆರೆ: ಪಡೆದಿದ್ದು ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ. ದ್ವಿತೀಯ ದರ್ಜೆ ಸಹಾಯಕರಾಗಿ( ಎಸ್ ಡಿಎ) ಸರ್ಕಾರಿ ಕೆಲಸಕ್ಕೆ ಸೇರಿ, ಹಲವು ಬಡ್ತಿಯ ಬಳಿಕ ಪ್ರಸ್ತುತ ದಾವಣಗೆರೆ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕರಾದ ಕಮಲ್‌ರಾಜ್ ಮೇಲೆ ಲೋಕಾಕಯುಕ್ತದಲ್ಲಿ ಅಕ್ರಮ ಆಸ್ತಿ ಸಂಪಾದನೆ ದೂರು ದಾಖಲಾಗಿತ್ತು. ಈ ಹಿನ್ನೆಲೆ ದಾವಣಗೆರೆ ಲೋಕಾಯುಕ್ತ ದಾಳಿ ನಡೆಸಿದ್ದು, ದಾಳಿ ವೇಳೆ ಅಕ್ರಮ ಆಸ್ತಿ ದಾಖಲೆ, ನಗದು, ಚಿನ್ನ ವಶಕ್ಕೆ ಪಡೆದಿದ್ದಾರೆ.
- ದಾವಣಗೆರೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲ್‌ರಾಜ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ
- ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಮನೆ ಮೇಲೆ ದಾಳಿ
- ಚಿತ್ರದುರ್ಗದಲ್ಲಿ 2 ಮನೆ, 3 ನಿವೇಶನ, ದಾವಣಗೆರೆಯಲ್ಲಿ 1 ಮನೆ, ಇನ್ನೋವಾ ಕಾರು, ಬುಲೆಟ್ ಬೈಕ್ ,1 ಲಕ್ಷ ನಗದು, 100 ಗ್ರಾಂ ಚಿನ್ನಾಭರಣ ಪತ್ತೆ
ಅಕ್ರಮ ಆಸ್ತಿ ಸಂಪಾದನೆಯ ದೂರಿನ ಆಧಾರದ ಮೇರೆಗೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಚಿತ್ರದುರ್ಗ, ದಾವಣಗೆರೆಯ ಮನೆಗಳು ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.
ಕಲಮ್ ರಾಜ್ ನಿವಾಸದಲ್ಲಿ ಶೋಧ ನಡೆಸಿದ ಲೋಕಾಯುಕ್ತ ಪೊಲೀಸರು, ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ 1 ಲಕ್ಷ ನಗದು, 100 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಇನ್ನೂ ಚಿತ್ರದುರ್ಗದಲ್ಲಿ 2 ಮನೆ, 3 ನಿವೇಶನ ಹಾಗೂ ದಾವಣಗೆರೆಯಲ್ಲಿ 1 ಮನೆ ಹೊಂದಿರುವುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಒಂದು ಇನ್ನೋವಾ ಕಾರು, ಬುಲೆಟ್ ಬೈಕ್ ಸೇರಿ ಇತರ ಸ್ವತ್ತು ಇರುವುದು ಪತ್ತೆಯಾಗಿವೆ.
ಕಮಲ್‌ರಾಜ್ 1997ರಲ್ಲಿ ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರು. ಹಲವು ಬಡ್ತಿಯ ಬಳಿಕ ಸಹಾಯಕ ನಿರ್ದೇಶಕರಾಗಿದ್ದರು. ದಾಳಿಯಲ್ಲಿ ಇನ್‌ಸ್ಪೆಕ್ಟರ್ ಮಧುಸೂದನ್ ಹಾಗೂ ಪ್ರಭು ಸೇರಿ ಸಿಬ್ಬಂದಿ ಭಾಗಿಯಾಗಿದ್ದರು.