ದಾವಣಗೆರೆ: ರಾಜ್ಯದಲ್ಲಿ ವಕ್ಫ್ ವಿವಾದ ಭಾರೀ ಸದ್ದು ಮಾಡುತ್ತಿದೆ. ರೈತರ ಜಮೀನು, ಮಠ-ಮಂದಿರ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ವಕ್ಫ್ ಬೋರ್ಡ್ ತಮ್ಮ ಆಸ್ತಿ ಎಂದು ನೋಂದಣಿ ಮಾಡಿಕೊಂಡಿದೆ. ಎಲ್ಲಿ ನಮ್ಮ ಭೂಮಿನೂ ಗೊತ್ತಿಲದ್ದಂತೆ ವಕ್ಫ್ ಗೆ ಸೇರಿಸಿ ಬಿಡ್ತಾರೋ ಏನೋ ಎಂಬ ಆತಂಕದಲ್ಲಿ ಜನ ಕಾಲ ಕಳೆಯುವಂತಾಗಿದೆ. ಹೌದು, ಇಂಹತದ್ದೇ ಆತಂಕ ದಾವಣಗೆರೆ ಜನರಲ್ಲಿಯೂ ಉಂಟಾಗಿದೆ. ದಾವಣಗೆರೆ ಮಹಾನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಬಡಾವಣೆ, 50 ವರ್ಷದ ಹಿಂದೆ ಬಡಾವಣೆಯಾಗಿ ಮನೆ ನಿರ್ಮಿಸಿಕೊಂಡ ಜಾಗ ಈಗ ವಕ್ಫ್ ಹೆಸರು ನೋಂದಣಿಯಾಗಿರುವುದು ಜನರಲ್ಲಿ ಆತಂಕ ಸೃಷ್ಠಿಸಿದೆ.
- ನಗರದ ಪ್ರತಿಷ್ಠಿತ ಬಡಾವಣೆಯ 4.13 ಎಕರೆ ಆಸ್ತಿ ವಕ್ಫ್ ಗೆ ನೋಂದಣಿ
- 2015ರಲ್ಲಿ ಅದಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ವಕ್ಫ್ ಸಂಸ್ಥೆಗೆ ಖಾತೆ ಬದಲಾವಣೆ
- ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿ
- ಆತಂಕದಲ್ಲಿ ಬಡಾವಣೆಯ ನಿವಾಸಿಗಳು
ಪ್ರಿನ್ಸ್ ಜಯಚಾಮರಾಜೇಂದ್ರ (ಪಿಜೆ ಬಡಾವಣೆ) ಬಡಾವಣೆಯ 4 ಎಕರೆ 13 ಗುಂಟೆ ಜಾಗ ಈಗ ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ ಹೆಸರಿಗೆ ನೋಂದಣಿಯಾಗುದೆ. 2015ರಲ್ಲಿ ಅದಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ವಕ್ಫ್ ಸಂಸ್ಥೆಗೆ ಖಾತೆ ಬದಲಾವಣೆ ಮಾಡಿದ್ದು, ಇಲ್ಲಿನ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ವರ್ಷಗಳ ಹಿಂದೆ ಪಹಣಿಯಲ್ಲಿ ಆಗಿರುವ ಈ ಬದಲಾವಣೆ ಈಗ ಜನರಿಗೆ ಗೊತ್ತಾಗಿದೆ.
ಪಿ.ಜೆ. ಬಡಾವಣೆಯ ಸರ್ವೇ ನಂಬರ್ 53 ರಲ್ಲಿನ 4 ಎಕರೆ 13 ಗುಂಟೆ ಪ್ರದೇಶ ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ 2015 ರಲ್ಲಿ ನೋಂದಣಿಯಾಗಿರುವುದು ಈಗ ಬಹಿರಂಗಗೊಂಡಿದೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಪಿಜೆ ಬಡಾವಣೆಗೆ, ಮೈಸೂರು ಅರಸರ ಗೌರವಾರ್ಥ ಪ್ರಿನ್ಸ್ ಜಯಚಾಮರಾಜೇಂದ್ರ ಹೆಸರಿಡಲಾಗಿದೆ. 1950 ಕ್ಕಿಂತ ಹಿಂದೆಯೇ ಈ ಜಮೀನು ಸ್ಥಳೀಯ ಸಂಸ್ಥೆಗಳಿಂದ ಬಡವರಿಗೆ ನಿವೇಶನವಾಗಿ ನೀಡಿದ್ದು ಮಹಾನಗರ ಪಾಲಿಕೆಯಿಂದ ಮನೆ ನಂಬರ್ ನೀಡಲಾಗಿದೆ.
ಈಗಾಗಲೇ ಖಾತೆದಾರರ ಹೆಸರಲ್ಲಿ ಆಸ್ತಿ ನೋಂದಣಿಯಾಗಿ ದಾಖಲೆ ಪಾಲಿಕೆಯಲ್ಲಿ ತೆರಿಗೆ ಸಹ ಕಟ್ಟುತ್ತಿದ್ದಾರೆ. ಮೂರ್ನಾಲ್ಕು ತಲೆಮಾರುಗಳಿಂದ ಜನರು ಇದೇ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. 2015 ರಲ್ಲಿ ಸ್ಥಳ ಪರಿಶೀಲಿಸದೇ ಅಧಿಕಾರಿಗಳು ಏಕಾಏಕಿ ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿ ಮಾಡಿದ್ದು , ಬಡಾವಣೆಯ ನೂರಾರು ಜನರು ಆತಂಕಪಡುವಂತಾಗಿದೆ.
ಈ ಬಗ್ಗೆ ಬಿಜೆಪಿ ನಾಯಕರ ನಿಯೋಗ ಜಿಲ್ಲಾಧಿಕಾರಿ ಭೇಟಿ ಮಾಡಿದ್ದು, ಕೂಡಲೇ ದಾಖಲೆ ಪರಿಶೀಲಿಸಬೇಕು. ಖಾತೆ ಬದಲಾವಣೆ ಹೇಗೆ ಆಯ್ತು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಸ್ಪಂದಿಸದಿದ್ದರೆ ಉಗ್ರ ಹೋರಾಟ ಸೂಚನೆ ನೀಡಿದ್ದಾರೆ.



