ದಾವಣಗೆರೆ; ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಕೆವೈಸಿ, ಬಯೋಮೆಟ್ರಿಕ್ ಮೂಲಕ ಅವರ ಖಾತೆಗೆ ಹಣ ಜಮೆಯಾಗುವಂತೆ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ ಬಸವರಾಜ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳು ಜಂಟಿಯಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣೆ, ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕದ ವ್ಯತ್ಯಾಸ, ಆಹಾರಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಸಿಗುವಂತಾಗಬೇಕು. ಆದ್ದರಿಂದ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಗಳ ಮಾಹಿತಿ ಕುರಿತು ಆಂದೋಲನ ಕೈಗೊಳ್ಳಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.ಈ ಯೋಜನೆಗಳು ಯಾರಿಗೆ ತಲುಪುತ್ತಿಲ್ಲ, ಅಂತವರಿಗೆ ಅರವು ಮೂಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ನೀಡುವ ಸಮಯದ ವೇಳಾಪಟ್ಟಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ಅನ್ಯಭಾಗ್ಯ ಯೋಜನೆಯ ಕುರಿತು ಉಪನಿರ್ದೇಶಕರು ಮಾಹಿತಿ ನೀಡಿ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 2023 ರಿಂದ ಜೂನ್ 2024 ರವರೆಗೆ ಒಟ್ಟಾರೆ 341792 ಪಡಿತರ ಚೀಟಿದಾರರಿದ್ದು, ಅದರಲ್ಲಿ 1226537 ಫಲಾನುಭವಿಗಳು ಅನ್ಯಭಾಗ್ಯ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು, ಈ ಎಲ್ಲಾ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯ ಹಣವನ್ನು ಡಿ.ಬಿ.ಟಿ. ಮೂಲಕ ಪ್ರತಿ ತಿಂಗಳು ಪಾವತಿಸಲಾಗಿದೆ. 2023 ರ ಜುಲೈ ನಿಂದ 2024 ರ ಜುಲೈವರೆಗೆ ರೂ.247.28 ಕೋಟಿ ವೆಚ್ಚ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ತಾಲ್ಲೂಕುಗಳಿಂದ 366937 ಫಲಾನುಭವಿಗಳು ನೊಂದಣಿಯಾಗಿದ್ದು ಇದರಲ್ಲಿ 358289 ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯೋಜನೆ ಆರಂಭವಾದ 2023 ರ ಆಗಸ್ಟ್‍ನಿಂದ 2024 ರ ಮಾರ್ಚ್‍ವರೆಗೆ ರೂ.751.38 ಕೋಟಿ ಡಿಬಿಟಿ ಮೂಲಕ ಮಹಿಳೆಯರಿಗೆ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಚಾಲ್ತಿಯಲ್ಲಿರುವ 487228 ಸ್ಥಾವರಗಳಲ್ಲಿ 433758 ಸ್ಥಾವರಗಳ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದು 53470 ಆರ್.ಆರ್.ಸಂಖ್ಯೆಯವರು ಮಾತ್ರ ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ 11 ಜೂನ್ 2023 ರಿಂದ ಸೆಪ್ಟೆಂಬರ್ 2024 ರವರೆಗೆ ಒಟ್ಟಾರೆ 5,02,97,487 ಪ್ರಯಾಣಿಕರು ಬಸ್‍ಗಳಲ್ಲಿ ಸಂಚರಿಸಿದ್ದು, ಪ್ರಯಾಣ ವೆಚ್ಚವಾಗಿ ಒಟ್ಟು ರೂ.136,65,25,048 ಗಳನ್ನು ಸರ್ಕಾರ ಭರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ಜನವರಿ 2024 ರಿಂದ ಜುಲೈ 2024ರವರೆಗೆ 12243 ಪದವಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಪಾವತಿಯಾದ ಮೊತ್ತ ರೂ.3,67,29,000, ಹಾಗೂ 147 ಡಿಪ್ಲೊಮೋ ಫಲಾನುಭವಿಗಳಿಗೆ ರೂ.2,20,500 ಗಳನ್ನು ಪಾವತಿಸಲಾಗಿದೆ.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ, ನಂಜಾನಾಯ್ಕ, ಅನೀಪ್ ಪಾಷ ಹಾಗೂ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರುಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಉಪಸ್ಥಿತರಿದ್ದರು.