ದಾವಣಗೆರೆ: ನಗರದ ಬೇತೂರು ರಸ್ತೆಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ 30 ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಿಡಿಗೇಡಿಗಳ ಮನೆಗಳಿಗೆ ನುಗ್ಗಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 4 ಪೊಲೀಸ್ ಠಾಣೆಗಳಲ್ಲಿ 4 ಎಫ್ ಐಆರ್ ಗಳು ದಾಖಲಾಗಿವೆ.
ನಗರದ ಬೇತೂರು ರಸ್ತೆಯಲ್ಲಿರುವ ಅರಳಿಮರ ವೃತ್ತ ಮತ್ತು ವೆಂಕಟೇಶ್ವರ ವೃತ್ತದ ಬಳಿ ಗಣೇಶ ವಿಸರ್ಜನಾ ವೇಳೆ ನಡೆದ ಕಲ್ಲು ತೂರಾಟದ ಘಟನೆಯಿಂದ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ಕಲ್ಲು ತೂರಲಾಗಿತ್ತು. ಇದೀಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.
ಬೇತೂರು ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ರಾತ್ರಿ 7.30ರ ವೇಳೆಗೆ ವೆಂಕಟೇಶ್ವರ ದೇವಸ್ಥಾನದ ವೃತ್ತಕ್ಕೆ ಬಂದಾಗ ಕೆಲವರು ಘೋಷಣೆ ಕೂಗಿದ್ದರಿಂದ ಗಲಭೆ ಆರಂಭವಾಗಿದ್ದು, ಅನ್ಯ ಕೋಮಿನವರು ಮೆರವಣಿಗೆಯಲ್ಲಿದ್ದ ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿತ್ತು.ಬಂದೋಬಸ್ತ್ ನಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಅನ್ನಪೂರ್ಣಾ, ರಘು ಕಲ್ಲು ಹೊಡೆತ ಬಿದ್ದು ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 30 ಜನರನ್ನ ಬಂಧಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ರಮೇಶ್ ಬಿ. ತಿಳಿಸಿದ್ದಾರೆ.
ರಾತ್ರಿಯಿಡೀ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೆರವಣಿಗೆ ಅಲ್ಲದೇ ಜನವಸತಿ ಪ್ರದೇಶದಲ್ಲಿ ಸಹ ಕಲ್ಲು ತೂರಾಟ ನಡಸಲಾಗಿದೆ. ಈ ಬಗ್ಗೆ ಕೂಡಾ ಎಫ್ ಐಆರ್ ದಾಖಲಿಸಲಾಗಿದೆ.ಯಾರೇ ಕೋಮುಭಾವನೆ ಕೆರಳಿಸುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಕಲ್ಲು ತೂರಾಟದ ಘಟನೆಯ ನಂತರ 50ರಿಂದ 60 ಜನರಿದ್ದ ಕಿಡಿಗೇಡಿಗಳ ಗುಂಪೊಂದು ಆನೆಕೊಂಡ ಬಡಾವಣೆಯಲ್ಲಿ ಮನೆಗಳ ಮೇಲೆ ದಾಂಧಲೆ ನಡೆಸಿದೆ.ಕೈಯಲ್ಲಿ ಮಚ್ಚು, ದೊಣ್ಣೆ ಸೇರಿದಂತೆ ಮಾರಾಕಾಸ್ತ್ರಗಳನ್ನು ಹಿಡಿದು ಗುಂಪು ಓಡಾಡಿದೆ. ಆನಕೊಂಡ ಬಡಾವಣೆಯಲ್ಲಿ ಆತಂಕ ಸೃಷ್ಟಿಸಿದ ಪುಂಡರು, ಮನೆಗಳ ಹೊರಗೆ ನಿಲ್ಲಿಸಿದ್ದ ಬೈಕ್, ಕಾರು ಜಖಂಗೊಳಿಸಿದ್ದಾರೆ. ಬಡಾವಣೆ ಜನರು ಇಡೀ ರಾತ್ರಿಆತಂಕದಲ್ಲೇ ಕಾಲ ಕಳೆದಿದ್ದಾರೆ ಎಂದು ಸ್ಥಳೀಯರು ಪೊಲೀಸರ ಎದುರು ಆಕ್ರೋಶ ಹೊರಹಾಕಿದ್ದಾರೆ.



