ದಾವಣಗೆರೆ: ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಮಾಲಾರ್ಪಣೆ ಬಂದಿದ್ದ ಜೆಸಿಬಿ ಏಕಾಏಕಿ ಜನರತ್ತ ನುಗ್ಗಿದ್ದರಿಂದ ಐದಾರು ಮಂದಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬ ಜೆಸಿಬಿಯಲ್ಲಿ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಲು ತಂದಿದ್ದ ಜೆಸಿಬಿ ಸರಿಯಾಗಿ ಚಾಲನೆ ಮಾಡದಿದ್ದರಿಂದ ಈ ಘಟನೆ ಸಂಭವಿಸಿದೆ. ಜೆಸಿಬಿ ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ್ದರಿಂದ ಏಕಾಏಕಿ ಗುಂಪಿನಲ್ಲಿದ್ದವರತ್ತ ನುಗ್ಗಿದ್ದತಿಂದ ಈ ದುರ್ಘಟನೆ ನಡೆದಿದೆ.
ಜೆಸಿಬಿ ತಿರುಗಿದ ಭರದಲ್ಲಿ ಚಕ್ರವು ಬಸಮ್ಮ ಎಂಬ ಮಹಿಳೆಯ ಹೊಟ್ಟೆಯ ಮೇಲೆ ಹರಿದಿದೆ. ನಂತರ ಸಮೀಪವಿದ್ದ ಗ್ರಾಮದ ದೇವಸ್ಥಾನದ ಹಳೆಯ ಗೋಡೆಗೆ ಬಡಿದಿದ್ದರಿಂದ ಗೋಡೆ ಬಿದ್ದು 8 ವರ್ಷದ ಸಿರಿ ಎಂಬ ಬಾಲಕಿ ಸೇರಿದಂತೆ ಐದಾರು ಮಂದಿಗೆ ತೀವ್ರ ಗಾಯವಾಗಿದೆ. ಬಳಿಕ ಹರಸಾಹಸ ಮಾಡಿ, ಜೆಸಿಬಿ ನಿಲ್ಲಿಸಿದ್ದಾರೆ. ಚಕ್ರಕ್ಕೆ ಸಿಲುಕಿದ್ದ ಮಹಿಳೆ ಬಸಮ್ಮನನ್ನು ಗ್ರಾಮಸ್ಥರು ತಕ್ಷಣವೇ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಮಲೇಬೆನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಂಭೀರ ಗಾಯಗೊಂಡಿರುವ ಬಸಮ್ಮನಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ. ಗ್ರಾಮದ ಯುವಕರು ತಕ್ಷಣವೇ ಗಣೇಶ ಮೂರ್ತಿ ಒಯ್ದು ವಿಸರ್ಜಿಸಿದ್ದಾರೆ. ಜೆಸಿಬಿ ವಶಕ್ಕೆ ಪಡೆದ ಮಲೇಬೆನ್ನೂರು ಪೊಲೀಸರು ಜೆಸಿಬಿ ಚಾಲನೆ ಮಾಡಿದ ಯುವಕನ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.



