ದಾವಣಗೆರೆ: ಈ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಈರುಳ್ಳಿಯಲ್ಲಿ ನೇರಳೆ ಎಲೆ ಮಚ್ಚೆ ರೋಗದ ಭಾದೆ ತೀವ್ರವಾಗಿದ್ದು, ಗಡ್ಡೆಗಳ ಬೆಳೆವಣಗೆಯೂ ಸಹ ಕುಂಠಿತವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ನಿಬಗೂರು ಗ್ರಾಮದಲ್ಲಿ ಹಮ್ಮಿಕೊಂಡ “ಈರುಳ್ಳಿಯಲ್ಲಿ ಭೀಮಾ ಡಾರ್ಕ್ ರೆಡ್ ತಳಿಯ ಕ್ಷೇತ್ರೋತ್ಸವ”ದಲ್ಲಿ ಮಾತನಾಡಿದ ಅವರು, ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಹಮ್ಮಿಕೊಂಡ ವೈಜ್ಞಾನಿಕ ನಿರ್ವಹಣಾ ಕ್ರಮಗಳಾದ ಟ್ರೆöÊಕೋಡರ್ಮಾ ಬೀಜೋಪಚಾರ, ಲಘು ಪೋಷಕಾಂಶಗಳ ಬಳಕೆ ಹಾಗೂ ಅಗತ್ಯ ಸಸ್ಯ ಸಂರಕ್ಷಣಾ ಕ್ರಮಗಳಿಂದ ಬೆಳೆ ಉತ್ತಮವಾಗಿ ಬಂದಿದೆ.ಗುಣಮಟ್ಟದ ಆಧಾರದಲ್ಲಿ ತರಕಾರಿಗಳನ್ನು ವರ್ಗೀಕರಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ಬೆಲೆಯನ್ನು ನಿರೀಕ್ಷಿಸಬಹುದೆಂದರು.
ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಅವಿನಾಶ್ ಟಿ.ಜಿ. ಮಾತನಾಡಿ, ರೈತರು ಈಗ ಬೆಳೆದಿರುವ ಈರುಳ್ಳಿ ಕೂಳೆಯಲ್ಲಿ ಮತ್ತೆ ಈರುಳ್ಳಿ ಬೆಳೆಯದೇ ಯಾವುದಾದರೊಂದು ದ್ವಿದಳ ಧಾನ್ಯದ ಬೆಳೆಯನ್ನು ಬೆಳೆಯುವುದರಿಂದ ಮಣ್ಣು ಫಲವತ್ತತೆಯಾಗುವುದರ ಜೊತೆಗೆ ರೋಗ ರುಜನೆಗಳೂ ಸಹ ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಗ್ರಾಮದ ಪ್ರಾತ್ಯಕ್ಷೆಕೆ ರೈತ ನಾಗರಾಜ್ ತಮ್ಮ ಬೆಳೆಯ ಅನುಭವಗಳನ್ನು ಇತರೆ ರೈತರೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಿದರಕೆರೆ ರೈತ ಉತ್ಪಾದಕ ಕಂಪನಿಯ ನಿದೇರ್ಶಕ ರೇವಣಸಿದ್ದಪ್ಪ, ರೈತರಾದ ಗುರುಸಿದ್ದಪ್ಪನಗೌಡ, ವೀರೇಶ್, ಪ್ರವೀಣ, ಕಲ್ಲೇಶ್, ಗುರುಸಿದ್ದಪ್ಪ ಮತ್ತು ಶರಣಪ್ಪ ಇತರರು ಹಾಜರಿದ್ದರು.