ದಾವಣಗೆರೆ: ಚನ್ನಗಿರಿ ತಾಲೂಕಿನಲ್ಲಿ ಅಡಕೆ ಬೆಳೆ ಕಟಾವಿನ ಸಮಯವಾಗಿದ್ದು, ರೈತರು ಅಡಕೆ ಸಿಪ್ಪೆಯನ್ನು ರಸ್ತೆಯಲ್ಲಿ ಹಾಕಬಾರದು. ಈ ಸಿಪ್ಪೆಯಿಂದ ಕಾಂಪೊಸ್ಟ್ ಗೊಬ್ಬರ ತಯಾರಿಸಬಹುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನವೂ ಸಿಗಲಿದೆ. ಅದನ್ನು ಬಳಸಿ, ತೋಟಗಳಿಗೆ ಬೇಕಾದ ಗೊಬ್ಬರ ತಯಾರು ಮಾಡಿಕೊಳ್ಳಿ ಎಂದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸಲಹೆ ನೀಡಿದರು.
ಚನ್ನಗಿರಿ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚನ್ನಗಿರಿ ಪಟ್ಟಣದಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಒಂದೂವರೆ ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದರು.
ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಎಲ್ಲ ರೀತಿಯ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕೂಡಲೇ ಪುರಸಭೆ ಅಧಿಕಾರಿಗಳು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ. ದನಗಳನ್ನು ರಸ್ತೆಗೆ ಬಿಡುವುದನ್ನು ಸಂಪೂರ್ಣ ನಿಷೇಧಿಸಬೇಕು.
ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ದೊಡ್ಡ ತಾಲೂಕು ಆಗಿದೆ. ಪ್ರತಿದಿನ ಸಾವಿರಾರು ಜನ ಕಚೇರಿಗಳ ಕೆಲಸಕ್ಕೆ ಪಟ್ಟಣಕ್ಕೆ ಬರುತ್ತಾರೆ. ಇಲ್ಲಿನ ಎಲ್ಲ ಕಚೇರಿಗಳ ಮುಖ್ಯ ರಸ್ತೆಯ ಬದಿಯಲ್ಲಿ ಮತ್ತು ನೃಪತುಂಗ ರಸ್ತೆಯಲ್ಲಿ ಬಿಡಾಡಿ ದನಗಳು ಓಡಾಡುತ್ತಿವೆ. ಇದರಿಂದ ವಾಹನಗಳ ಸವಾರರು ಅನೇಕ ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಬಿಡಾಡಿ ದನಗಳ ಮಾಲೀಕರನ್ನುಪತ್ತೆ ಹಚ್ಚಬೇಕು. ನಿರ್ಲಕ್ಷಿಸುವ ದನಗಳ ಮಾಲೀಕರ ವಿರುದ್ಧ ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಆದೇಶಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರುಕ್ಮಿಣಿಬಾಯಿ, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಪಿಡಬ್ಲ್ಯೂಡಿ ಅಭಿಯಂತರ ರವಿಕುಮಾರ್, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಮೊದಲಾದವರು ಹಾಜರಿದ್ದರು.



