ದಾವಣಗೆರೆ: 30 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಮೂರು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 45.38 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿ ಟೌನ್ ನ ವಡ್ನಾಳ್ ರಾಜಣ್ಣ ಬಡಾವಣೆ ಆರೋಪಿ ಅಫ್ರೋಜ್ ಅಹಮ್ಮದ್ ( 42) ಮೇಲೆ ಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ, ಹೊಸದುರ್ಗ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಇವನ ಮೇಲೆ ಈ ಹಿಂದೆ ಸುಮಾರು 30ಕ್ಕೂ ಹೆಚ್ಚು ಸ್ವತ್ತು ಕಳವು ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್ , ಎಎಸ್ಪಿಗಳಾದ ವಿಜಯ್‍ಕುಮಾರ್ ಎಂ ಸಂತೋಷ್, ಮಂಜುನಾಥ್, ಡಿವೈಎಸ್ಪಿ ರುದ್ರಪ್ಪ ಎಸ್ . ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಚನ್ನಗಿರಿ ಠಾಣೆ ಮತ್ತು ಸಂತೇಬೆನ್ನೂರು ವೃತ್ತ ಕಛೇರಿ ಸಿಬ್ಬಂದಿ ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಈ ತಂಡವು ಮೇಲ್ಕಂಡ ಆರೋಪಿ ಅಫ್ರೋಜ್ ಅಹಮ್ಮದ್ ಪತ್ತೆ ಹಚ್ಚಿದ್ದು, ಆರೋಪಿಯು 1)ಚನ್ನಗಿರಿ ಪೊಲೀಸ್ ಠಾಣೆಯ 03 ಪ್ರಕರಣಗಳು, 2)ಸಂತೇಬೆನ್ನೂರು ಠಾಣೆಯ 01 ಪ್ರಕರಣ, 3)ತರೀಕೆರೆ ಠಾಣೆಯ 03 ಪ್ರಕರಣಗಳು, 4)ಲಕ್ಕವಳ್ಳಿ ಪೊಲೀಸ್ ಠಾಣೆಯ 04 ಪ್ರಕರಣಗಳು, 5)ಭದ್ರಾವತಿ ಪೇಪರ್‍ಟೌನ್ ಪೊಲೀಸ್ ಠಾಣೆಯ 01 ಪ್ರಕರಣ, ಹಾಗೂ 6)ಅಜ್ಜಂಪುರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣ ದಾಖಲಾಗಿದ್ದವು. ಆರೋಪಿತನ ಮಾಹಿತಿ ಮೇರೆಗೆ ಆರೋಪಿತನ ಪ್ರೇಯಸಿಯಾದ ಚನ್ನಗಿರಿಯ ಭಾಗ್ಯ, ಆತನ ಸ್ನೇಹಿತನಾದ ಅಜ್ಜಿಹಳ್ಳಿ ಗ್ರಾಮದ ಪ್ರವೀಣ ಎಂಬುವರ ಕಡೆಯಿಂದ ಮತ್ತು ಅವರುಗಳು ಮಾರಿದ ಬಂಗಾರದ ಅಂಗಡಿಗಳಿಂದ ಒಟ್ಟು ಸುಮಾರು 44,38,000/ರೂ ಮೌಲ್ಯದ 634 ಗ್ರಾಂ ಬಂಗಾರದ ಆಭರಣಗಳು ಹಾಗೂ ಸುಮಾರು 40,000/ ರೂ ಮೌಲ್ಯದ 550 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯವೆಸಗಲು ಬಳಸಿದ ಸುಮಾರು 60,000/ರೂ ಮೌಲ್ಯದ ಕೆಎ-17 ಇವಿ-5083 ನೇ ಒಂದು ಬೈಕ್ ಹಾಗೂ ಎರಡು ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ರೂ 45,38,000/(ನಲವತ್ತೈದು ಲಕ್ಷದ ಮೂವತ್ತೆಂಟು ಸಾವಿರ ರೂಪಾಯಿಗಳು) ಆಗಿರುತ್ತದೆ.
ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿತ ಮತ್ತು ಆತನ ಪ್ರೇಯಸಿ ಭಾಗ್ಯಳು ಸೇರಿಕೊಂಡು ಜಗಳೂರು ತಾಲ್ಲೂಕಿನಲ್ಲಿ ಓರ್ವ ವ್ಯಕ್ತಿಗೆ ಕಳ್ಳತನದ ಮಾಲನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಆತನ ಕಡೆಯಿಂದ ವಶಪಡಿಸಿಕೊಳ್ಳುವುದು ಬಾಕಿ ಇರುತ್ತದೆ.



